

ಶ್ರೀರಂಗಪಟ್ಟಣ: ವಾರ್ಷಿಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಹಬ್ಬದಂತೆ ಸ್ವಾಗತಿಸಿ ಬರಮಾಡಿಕೊಂಡು ಅದನ್ನು ಸಂಭ್ರಮಿಸಿ ಆನಂದಿಸಬೇಕೇ ಹೊರತು ಹೆದರಿ ನಿಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳಬಾರದು ಎಂದು ವ್ಯಕ್ತಿತ್ವ ವಿಕಸನದ ಅಂತಾರಾಷ್ಟ್ರೀಯ ತರಬೇತುದಾರ ಚೇತನ್ ರಾಮ್ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು 10ನೇ ತರಗತಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಯಾವುದೇ ಪರೀಕ್ಷೆಗಳಾಗಲಿ ಉತ್ತಮ ಸಿದ್ಧಾಂತಗಳಿಂದ ಯಶಸ್ವಿಯ ಹಾದಿಯನ್ನು ತಲುಪಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ತಮ್ಮೂರಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಜಾತ್ರೆ ಅಥವಾ ಹಬ್ಬಗಳಂತೆಯೇ ತಿಳಿದು ಪರೀಕ್ಷೆಗಳನ್ನು ಸಂಭ್ರಮಿಸಿ ಎದುರಿಸಿದಾಗ ಭಯ ದೂರವಾಗಿ ವಿಶ್ವಾಸ ಮೈಗೂಡುತ್ತದೆ ಎಂದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ನಾವು ಬೇರೆಯವರನ್ನು ಸುಲಭವಾಗಿ ನಂಬುವಷ್ಟು ನಮ್ಮನ್ನು ನಾವು ನಂಬುವುದಿಲ್ಲ. ಆದರೆ ಇದನ್ನು ನಮ್ಮಿಂದ ತೊರೆದು ಮೊದಲು ನಮ್ಮ ಆತ್ಮವಿಶ್ವಾಸವನ್ನು ನಂಬಬೇಕಿದೆ. ಭರವಸೆ ನಿಮ್ಮ ಮೊದಲ ಸ್ನೇಹವಾಗಬೇಕಿದೆ. ಪರೀಕ್ಷಾ ಕೇಂದ್ರದಲ್ಲಿ ಸಂಯಮದಿಂದ ಕುಳಿತು ಇಡಿ ವರ್ಷದಲ್ಲಿ ಪುಸ್ತಕದಿಂದ ಕಲಿತು ತಿಳಿದ ಪಠ್ಯ ಚಟುವಟಿಕೆಗಳನ್ನು ತಾಳ್ಮೆಯಿಂದ ಮಸ್ತಕದಿಂದ ಹೊರಹಾಕಿ ಉತ್ತರ ಪತ್ರಿಕೆಯಲ್ಲಿ ಮುದ್ರಿಸಿದಲ್ಲಿ ನೀವೂ ನಿಜ ಸಾಧಕರಾಗಿ ಹೊರಹೊಮ್ಮುವಿರಿ ಎಂದು ಸಲಹೆ ನೀಡಿದರು.
ಕಾರ್ಯಗಾರದಲ್ಲಿ ಬಿಇಒ ಆರ್.ಪಿ.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಶಿಕ್ಷಕ ಸಿ.ಜೆ.ಶ್ರೀನಿವಾಸ್, ನೋಡಲ್ ಅಧಿಕಾರಿ ಡಾ.ಪ್ರಭಾ, ಕ್ಷೇತ್ರ ಶಿಕ್ಷಣ ಸಂಯೋಜಕಿ ಬಿ.ಕೆ.ಪ್ರತಿಮಾ, ನಂಜುಂಡಾಚಾರಿ, ಬಾಲಕೃಷ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್, ಜ್ಯೋತಿಲಕ್ಷ್ಮೀ, ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ 3 ಪರೀಕ್ಷಾ ಕೇಂದ್ರಗಳಾದ ಜಿಜೆಸಿ, ರಿವರ್ ವ್ಯಾಲಿ ಹಾಗೂ ಓಂ ಶ್ರೀನಿಕೇತನ ಮತ್ತು ಕೇಂಬ್ರಿಡ್ಜ್ ಸೇರಿದಂತೆ ಒಟ್ಟು 25 ಶಾಲೆಗಳ 785 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಜರಿದ್ದರು.