

ಮಂಡ್ಯ: ನಗರದಲ್ಲಿ ಡಿ.20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮೀಣ ಭಾಗದ ಜನರು ಭಾಗವಹಿಸುವಂತೆ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಮನವಿ ಮಾಡಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಕನ್ನಡ ಜಾಗೃತಿ ರಥಕ್ಕೆ ಸ್ವಾಗತ ಕೋರಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಾಯಕರು, ಕನ್ನಡ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಕನ್ನಡ ಪ್ರೇಮಿಗಳಾಗಿ ಕೆಲಸ ಮಾಡೋಣ. ನಮ್ಮ ಮುಂದಿನ ಪೀಳಿಗೆಗೆ ಸಾಹಿತ್ಯದ ಮಹತ್ವವನ್ನು ತಿಳಿಸೋಣ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಕಲೆ ನಾಟಕ ಸಂಸ್ಕೃತಿ ಕ್ಷೇತ್ರಕ್ಕೆ ಮಂಡ್ಯ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಕೆರಗೋಡು ಸಂಚಿಹೊನ್ನಮ್ಮ, ತ್ರಿವೇಣಿ ಕವಿಗಳನ್ನು ಕೊಟ್ಟ ತವರೂರಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆದು ಹಲವು ಸಮಸ್ಯೆಗಳನ್ನು ಚರ್ಚೆಗೆ ತಂದು ಬಗೆಹರಿಸುವ ಕೆಲಸವನ್ನು ಒಟ್ಟಾಗಿ ಮಾಡೋಣ. ಇಲ್ಲಿ ನಡೆಯುವ ವಿಷಯಾಧಾರಿತ ಚರ್ಚೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಗಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ನಾಯಕಿ ಸುನಂದಾ ಜಯರಾಂ, ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್, ಉಪಾಧ್ಯಕ್ಷೆ ನಾಗರತ್ನಾ, ಸದಸ್ಯೆ ಶಾಂತಮ್ಮ, ಸಿಪಿಐ ಮಹೇಶ್, ಪಿಎಸ್‌ಐ ದೀಕ್ಷಿತ್, ಪಿಡಿಒ ವಿನಯ್‌ಕುಮಾರ್, ಕಸಾಪ ಪದಾಧಿಕಾರಿ ಚಂದ್ರಲಿಂಗು ಇತರರಿದ್ದರು.