

ಮಂಡ್ಯ: ಪಾಲಕರು ತಮ್ಮ ಮಕ್ಕಳನ್ನು ಅಂಕಗಳಿಕೆಯ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ. ಪರಿಣಾಮ ಅವರಲ್ಲಿ ಸಂಕುಚಿತ ಮನೋಭಾವನೆ ಬೆಳೆದು ಸಾಮಾಜಿಕ ತಿಳಿವಳಿಕೆ ಕುಂಠಿತವಾಗುತ್ತದೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡೀನ್ ಪ್ರೊ.ಎನ್.ಲಕ್ಷ್ಮೀ ಹೇಳಿದರು.
ನಗರದ ಸ್ವರ್ಣಸಂದ್ರದ ಎ.ಇ.ಟಿ ಶಿಕ್ಷಣ ಮಹಾವಿದ್ಯಾನಿಲಯ ಶನಿವಾರ ಆಯೋಜಿಸಿದ್ದ ಪ್ರಶಿಕ್ಷಣೋತ್ಸವ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಮಕ್ಕಳಲ್ಲಿ ಇರುವ ಸೃಜನಶೀಲತೆ ಹಾಗೂ ಪ್ರತಿಭೆಯನ್ನ ಗುರುತಿಸುವಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಅವರಲ್ಲಿ ಸೌಹಾರ್ಧತೆ, ತಾಳ್ಮೆ, ಸಹನೆ, ವಿವೇಚನೆ ಹಾಗೂ ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಫಲಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಎ.ಇ.ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶಾರದಾ ರಮೇಶರಾಜು ಮಾತನಾಡಿ, ಹೆಣ್ಣು ಮಕ್ಕಳು ಪ್ರಸ್ತುತ ದಿನಮಾನದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆಧುನಿಕ ಕಾಲದಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಅವಕಾಶಗಳ ಕೊರತೆಯಿಂದ ಅವರ ಪ್ರತಿಭೆಯನ್ನು ಅಭಿವ್ಯಕ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಪ್ರಾಂಶುಪಾಲರೂ ಆದ ಮಂಡ್ಯ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ.ಎಸ್.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿದ್ಯಾಸಾಗರ್, ನಿರ್ದೇಶಕರಾದ ಆಶಾರಾಣಿ, ವಿದ್ಯಾ, ಪ್ರಾಧ್ಯಾಪಕರಾದ ಎಚ್.ಸಿ.ಧರ್ಮೇಶ್, ಕೆ.ಮೋಹನ್, ಸುಕೇಶ್, ದಯಾನಂದ, ರಕ್ಷಿತಾ, ವಾಣಿ, ಬೀರೇಶ್ವರಿ, ಉಷಾ, ಸೌಮ್ಯಾ ಇತರರಿದ್ದರು. ಇದೇ ವೇಳೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.