

ತರೀಕೆರೆ: ಪರಮ ತಪಸ್ವಿ ಲಿಂಗೈಕ್ಯ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಬೆಟ್ಟಕ್ಕೆ ದಯಮಾಡಿಸಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ನವೆಂಬರ್ 23 ರಂದು ಶುಭಾಗಮನ ಶತಮಾನೋತ್ಸವ ಸಮಾರಂಭ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ರಂಭಾಪುರಿ ಮಠದ ಡಾ. ಶ್ರೀವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ಬುಕ್ಕಾಂಬುದಿ ಬೆಟ್ಟದ ಮೇಲಿನ ತಪೋಕ್ಷೇತ್ರದಲ್ಲಿ ಏರ್ಪಡಿಸಿದ್ದ ಶುಭಾಗಮನ ಶತಮಾನೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮದಲ್ಲಿ ಪಂಚ ಪೀಠಗಳಿಗೆ ಪವಿತ್ರ, ಮಹತ್ವಪೂರ್ಣ ಹಿನ್ನೆಲೆ ಇದೆ. ಲೋಕ ಕಲ್ಯಾಣ ಮತ್ತು ಜನಹಿತಕ್ಕಾಗಿ ಲಿಂಗೈಕ್ಯ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಮೂರು ತಿಂಗಳು ತಪಸ್ಸು ಮಾಡಿ ಭಕ್ತರಿಗೆ ಬಂದ ಕಷ್ಟಗಳನ್ನು ಪರಿಹರಿಸಿದರು. ಅವರು ಮಾಡಿದ ತಪಸ್ಸು ತೋರಿದ ದಾರಿ ಸರ್ವರಿಗೂ ಒಳ್ಳೆಯದನ್ನೇ ಉಂಟು ಮಾಡಿದೆ ಎಂದರು.
ಲಿಂಗೈಕ್ಯ ಶ್ರೀಗಳು ಬುಕ್ಕಾಂಬುದಿ ಬೆಟ್ಟಕ್ಕೆ ದಯಮಾಡಿಸಿ ನೂರು ವರ್ಷ ತುಂಬಿದ ಸವಿ ನೆನಪಿಗಾಗಿ ಶುಭಾಗಮನ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗುತ್ತಿದೆ. ಈ ವೇಳೆ ಅವರ ಪವಿತ್ರ ಜೀವನ ಸಾಧನೆ-ಸಿದ್ಧಿಗಳನ್ನು ವಿವರಿಸುವ ಹಲವಾರು ವಿದ್ವಾಂಸರ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರತರಲಾಗುವುದು. ಈ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಸ್ವಾಗತ ಸಮಿತಿ, ಉಪ ಸಮಿತಿ ರಚಿಸಿ ಹೊಣೆ ಹೊತ್ತವರಿಗೆ ಜವಾಬ್ದಾರಿ ವಹಿಸಿಕೊಡಲಾಗುವುದು. ಎಲ್ಲಾ ಭಾಗದ ಭಕ್ತರು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶುಭ ಹಾರೈಸಿದರು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯರು, ಹುಲಿಕೆರೆ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು, ಸೇರಿ ಹುಣಸಘಟ್ಟ, ನಂದಿಪುರ, ಹಣ್ಣೆ, ಬೀರೂರು, ಕೆ.ಬಿದರೆ, ತಾವರೆಕೆರೆ, ಬಿಳಕಿ, ಬೇರುಗಂಡಿಮಠದ ಶ್ರೀಗಳು, ಟ್ರಸ್ಟಿನ ಉಪಾಧ್ಯಕ್ಷ ವೀರಭದ್ರಪ್ಪ, ಕಾರ್ಯದರ್ಶಿ ಎಚ್.ಪಿ.ಸುರೇಶ್ ಮತ್ತಿತರರಿದ್ದರು.