ವಿಮಾನ ನಿಲ್ದಾಣಕ್ಕೆ ಐತಿಹಾಸಿಕ ಟಚ್!

belagavi airport
Published on

ಡಿ.ವಿ. ಕಮ್ಮಾರ ಬೆಳಗಾವಿ

ದೇಶ-ವಿದೇಶಿ ಪ್ರಯಾಣಿಕರಿಗೆ ಜಿಲ್ಲೆಯ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪರಂಪರೆ ತಿಳಿಸುವ ಉದ್ದೇಶದಿಂದ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಐತಿಹಾಸಿಕ ಟಚ್ ಕೊಡಲು ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದ್ದು, ಈಗಾಗಲೇ ಪೂರಕ ಕಾಮಗಾರಿಗಳು ಆರಂಭಗೊಂಡಿವೆ.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ವಿಮಾನಗಳ ಓಡಾಟ ಮತ್ತು ಪ್ರಯಾಣಿಕರ ಸಾಂಧ್ರತೆಯೂ ಹೆಚ್ಚುತ್ತಿದೆ. ಅಹಮದಾಬಾದ್, ಮುಂಬೈ, ಹೈದರಾಬಾದ್, ಬೆಂಗಳೂರಿಗೆ ವಿಮಾನಗಳು ಓಡಾಡುತ್ತಿವೆ. ಈ ಪಟ್ಟಣಗಳ ಮೂಲಕ ಬೇರೆ ಕಡೆ ಹಾಗೂ ಅಲ್ಲಿಂದ ಈ ಭಾಗಕ್ಕೆ ಬರುವ ವಿದೇಶಿಗರು, ಬೇರೆ ರಾಜ್ಯದವರು ಈ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಯ ವಿಮಾನಗಳು ಓಡಾಡುತ್ತಿವೆ. ಭವಿಷ್ಯದಲ್ಲಿ ಇನ್ನೂ ಅನೇಕ ನಗರಗಳಿಗೆ ಇಲ್ಲಿಂದ ನೇರ ವಿಮಾನ ಸಂಪರ್ಕ ಕಲ್ಪಿಸುವ ಚಿಂತನೆಗಳು ನಡೆದಿವೆ. ಅದಕ್ಕೆ ತಕ್ಕಂತೆಯೇ ವಿವಿಧ ಅಭಿವೃದ್ಧಿ ಕಾರ್ಯಗಳು ಶುರುವಾಗಿದ್ದು, ವಿಮಾನ ನಿಲ್ದಾಣವನ್ನು ಬೆಳಗಾವಿಯ ಐತಿಹಾಸಿಕತೆಯನ್ನು ಸಾರಿ ಹೇಳುವ ತಾಣವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.

ನಿಲ್ದಾಣ ಪ್ರವೇಶಿಸಲು ಐತಿಹಾಸಿಕ ಕಮಲ ಬಸದಿ ಮಾದರಿಯಲ್ಲಿ ಹೊಸದಾಗಿ ಮುಖ್ಯ ಗೇಟ್ ನಿರ್ಮಾಣವಾಗುತ್ತಿದೆ. ಮುಖ್ಯ ಕಟ್ಟಡದ ಬಳಿ ಈ ಸ್ವಾಗತ ಕಮಾನು ನಿರ್ಮಾಣವಾಗುತ್ತಿದೆ. ಕೆಲವೇ ತಿಂಗಳಿನಲ್ಲಿ ಒಟ್ಟು ನಾಲ್ಕು ಪಿಲ್ಲರ್‌ಗಳ ಮೇಲೆ ಕಮಲ್ ಬಸದಿಯ ಮಾದರಿಯನ್ನು ಅಳವಡಿಸಲಿದ್ದಾರೆ.

ಸಂಸ್ಕೃತಿ ಅನಾವರಣ: ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಟರ್ಮಿನಲ್ ಕಟ್ಟಡದಲ್ಲಿ ಸ್ಥಳೀಯ ಸಂಸ್ಕೃತಿ, ಕಲೆ, ಇತಿಹಾಸಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಪ್ರಮುಖ ಗೋಡೆಗಳ ಮೇಲೆ ಬೃಹತ್ ಚಿತ್ರಗಳನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ಕೇಳಿದ್ದಾರೆ. ಇದಕ್ಕೆ ಸ್ಪಂದಿಸಿರುವ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ನಿಯೋಜಿತ ಕಟ್ಟಡವನ್ನು ಪರಿಶೀಲಿಸಿದ್ದಾರೆ. ಎಲ್ಲೆಲ್ಲಿ ಯಾವ್ಯಾವ ಕಲಾಕೃತಿಗಳನ್ನು ಅನಾವರಣಗೊಳಿಸಿದರೆ ಸೂಕ್ತ ಎನ್ನುವುದರ ಜತೆಗೆ ಬೆಳಗಾವಿಯ ಹೆಮ್ಮೆಯ ಪ್ರತೀಕವಾಗಿರುವ ಕಿತ್ತೂರು ಚನ್ನಮ್ಮನ ಕಲಾಕೃತಿಯನ್ನು ಪ್ರಮುಖ ಆಕರ್ಷಣೆಯ ಕೇಂದ್ರವನ್ನಾಗಿ ಅಳವಡಿಸುವಂತೆಯೂ ಸಲಹೆ ನೀಡಿದ್ದಾರೆ.

ಜಿಲ್ಲೆಯ ಕಲೆ, ಸಂಸ್ಕೃತಿ, ಸಾಹಿತ್ಯ, ಸ್ವಾತಂತ್ರೃ ಹೋರಾಟದ ಇತಿಹಾಸ, ಹೋರಾಟಗಾರರ ಕುರಿತಾದ ಸಮಗ್ರ ಮಾಹಿತಿಯುಳ್ಳ ವರದಿ ಹಾಗೂ ಆಯಾ ಕಲಾಕೃತಿಗೆ ಸಂಬಂಧಿಸಿದಂತೆ ಯಾವ ಕಲಾವಿದರೂ ಸೂಕ್ತ ಎನ್ನುವ ಮಾಹಿತಿಯನ್ನು ಇಲಾಖೆ ನೀಡಲಿದ್ದು, ಅದರ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ಮುಂದಿನ ಕಾರ್ಯವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಮಾಡಲಿದೆ. ಒಟ್ಟಾರೆ ಕೆಲವೇ ತಿಂಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣ ಬೆಳಗಾವಿಯ ಹೆಮ್ಮೆಯ ಪ್ರತೀಕವಾಗಿ ಕಂಗೊಳಿಸಲಿದೆ.

ರಾಣಿ ಚನ್ನಮ್ಮನ ಇತಿಹಾಸ ಸೇರಿ ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ, ಕಲೆ, ಸಂಸ್ಕೃತಿ, ಸಾಹಿತ್ಯದ ಕುರಿತ ಚಿತ್ರಕೃತಿಗಳನ್ನು ರಚಿಸಿಲು ನಮ್ಮ ಇಲಾಖೆ ಸಲಹೆ ನೀಡಲಿದೆ. ಆಯಾ ಕಲಾಕೃತಿಗೆ ಸಂಬಂಧಿಸಿದ ವರದಿ ಹಾಗೂ ಅದಕ್ಕೆ ಸಂಬಂಧಿಸಿದ ಕಲಾವಿದರನ್ನು ಗುರುತಿಸಿ, ಸಂಪರ್ಕ ಒದಗಿಸಿಕೊಡುವ ಕೆಲಸ ಮಾಡಲಿದ್ದೇವೆ. ವಿದ್ಯಾವತಿ ಭಜಂತ್ರಿ ಉಪನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net