

ಕುಶಾಲನಗರ:
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಮೂಲಕ ಕಠಿಣ ಪರಿಶ್ರಮದಿಂದ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ ಚೇತನ್ ಹೇಳಿದರು. ಇಲ್ಲಿನ ಬೈಚನಹಳ್ಳಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲನ್ನು ಸಕಾರಾತ್ಮಕವಾಗಿ ಒಳ್ಳೆಯ ಉದ್ದೇಶಕ್ಕಾಗಿ ಬಳಸಬೇಕು. ಸ್ವಾಮಿ ವಿವೇಕಾನಂದರ ಅಧ್ಯಾಯದ ವಾಕ್ಯವನ್ನು ಉಲ್ಲೇಖಿಸಿದ ಅವರು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಗುರುತಿಸಿ ಅದನ್ನು ಒಂದು ತಪಸ್ಸಿನಂತೆ ರೂಪಿಸಬೇಕು. ಗುರು ಹಿರಿಯರು ತಂದೆ ತಾಯಿಗಳನ್ನು ಗೌರವದಿಂದ ಕಾಣಬೇಕೆಂದರು.
ಇದೇ ಸಂದರ್ಭ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಬುಲಿAಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಸಂಸ್ಥೆಯ ಖಜಾಂಚಿ ನಂಜಪ್ಪ, ಆಡಳಿತಾಧಿಕಾರಿ ಮಹೇಶ್, ಉಪನ್ಯಾಸಕ ವೃಂದ, ಪೋಷಕರು ಪಾಲ್ಗೊಂಡಿದ್ದರು.
ನಂತರ ವಿದ್ಯಾರ್ಥಿಗಳು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.