

ಗೊಳಸಂಗಿ: ಇಲ್ಲಿನ ದುರ್ಗಾದೇವಿ ನಗರ ರಸ್ತೆಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಸ್ಥಳೀಯ ಹಾಲುಮತ ಸಮಾಜದ ನೇತೃತ್ವದಲ್ಲಿ ನ.10 ರಿಂದ ಮೂರು ದಿನ ವಿಜೃಂಭಣೆಯಿಂದ ಜರುಗಲಿದೆ.
ನ.10 ರಂದು ಬೆಳಗ್ಗೆ 6 ಗಂಟೆಗೆ ಬೀರಲಿಂಗೇಶ್ವರ ಭವ್ಯಮೂರ್ತಿಗೆ ಅಭಿಷೇಕ, 9 ಗಂಟೆಗೆ ಬನಶಂಕರಿ ದೇವಸ್ಥಾನ ಬಳಿಯ ಗಂಗಾಸ್ಥಳದಿಂದ ಬೀರಲಿಂಗೇಶ್ವರ ದೇವರ ಕಲಶ ಹಾಗೂ ಪಲ್ಲಕ್ಕಿಗಳ ಬೃಹತ್ ಮೆರವಣಿಗೆ ದೇವಸ್ಥಾನದವರೆಗೆ ಜರುಗಲಿದೆ.
ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 10 ಗಂಟೆಗೆ ಬೆಳಗಾವಿ ಜಿಲ್ಲೆಯ ಮುಗಳಿಹಾಳದ ಸುಮಿತ್ರಾ ಮುಗಳಿಹಾಳ, ಸೊಲ್ಲಾಪುರ ಜಿಲ್ಲೆಯ ಅಳಗಿ ಗ್ರಾಮದ ಪಿಂಟು ಅಳಗಿ ಮತ್ತು ಸಂಗಡಿಗರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿದೆ.
ನ.11 ರಂದು ಬೆಳಗ್ಗೆ 9 ಗಂಟೆಗೆ ಸಿಡಿಗಲ್ಲು ಎತ್ತುವ ಸ್ಪರ್ಧೆ, ಸಂಗ್ರಾಣಿ ಹೊತ್ತಕಲ್ಲು ಎತ್ತುವ ಸ್ಪರ್ಧೆ, ಗುಂಡು ಕಲ್ಲು ಎತ್ತುವ ಸ್ಪರ್ಧೆ, ಭಾರವಾದ ಚೀಲ ಎತ್ತುವ ಸ್ಪರ್ಧೆ ನಡೆಯಲಿದೆ. ರಾತ್ರಿ 10 ಗಂಟೆಗೆ ಜೇವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದಿಂದ ‘ಕುಂಟ ಕೋಣ, ಮೂಕ ಜಾಣ’ ನಾಟಕ ಪ್ರದರ್ಶನ ಇರುವುದು.
ನ.12 ರಂದು ಸಂಜೆ 5 ಗಂಟೆಗೆ ಹಾಲು ಹಲ್ಲಿನ, ಎರಡು ಹಲ್ಲಿನ, ನಾಲ್ಕು ಹಲ್ಲಿನ ಟಗರಿನ ಕಾಳಗ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.