ಖಾಸಗಿ ಶುಗರ್ಸ್ಗಳಿಂದ ತೂಕದಲ್ಲಿ ಮೋಸ

22ATHANI1
Published on

ಅಥಣಿ: ರಾಜ್ಯದ ಬಹುತೇಕ ಖಾಸಗಿ ಕಬ್ಬು ಕಾರ್ಖಾನೆಗಳು ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದು, ಜತೆಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರವೂ ನೀಡುತ್ತಿಲ್ಲ. ಅದಕ್ಕಾಗಿಯೇ ಸರ್ಕಾರವೇ ತೂಕದ ಮಾಪನ ಅಳವಡಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸ್ಥಳೀಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೩೩ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಹಕಾರ ರಂಗದ ಕಾರ್ಖಾನೆಗಳು ಸರ್ಕಾರದ ನಿಯಮ ಪಾಲಿಸಿ ಸಾಲ ಮಾಡಿ ನಷ್ಟ ಅನುಭವಿಸುತ್ತಿವೆ. ಆದರೆ, ಖಾಸಗಿಯವರು ಯಾವುದೇ ನಿಯಮ ಪಾಲಿಸದೆ ಮೋಸ ಮಾಡಿ ಬೆಳೆಯುತ್ತಿದ್ದು, ಇದು ಸಹಕಾರ ರಂಗದ ಕಾರ್ಖಾನೆಗಳ ಒಕ್ಕೂಟದಲ್ಲಿ ಚರ್ಚೆಯಾಗಬೇಕಿದೆ. ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಬೃಹತ್ ಹೋರಾಟದ ಮೂಲಕ ರೈತರ ಜತೆಗೂಡಿ ಸರ್ಕಾರದ ಗಮನ ಸೆಳೆಯಲು ಗಂಭೀರ ಚಿಂತನೆ ನಡೆಸಲಾಗುವುದು ಎಂದರು. ಕಡಿಮೆ ಬಡ್ಡಿದರದಲ್ಲಿ ಸಹಕಾರ ರಂಗದ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರದ ಎನ್‌ಸಿಡಿಸಿಯಿಂದ ಸಾಲ ವಿತರಣೆ ಮಾಡುವಂತೆ ಮುಖ್ಯಮಂತ್ರಿಗೆ ಸಚಿವರ ನಿಯೋಗದೊಂದಿಗೆ ಭೇಟಿಯಾಗಿ ಮನವರಿಕೆ ಮಾಡಿದ್ದೇವೆ. ಇದರಿಂದ ಬೇರೆ ಬ್ಯಾಂಕ್‌ಗಳಿಗೆ ಬಡ್ಡಿ ನೀಡುವುದು ಉಳಿತಾಯವಾಗಲಿದ್ದು, ಸಿಎಂ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ಒಟ್ಟು ನುರಿಸಿದ ಕಬ್ಬು ೪.೩೬ ಲಕ್ಷ ಮೆ.ಟನ್. ಉತ್ಪಾದಿಸಿದ ಸಕ್ಕರೆ ೪.೮೧ ಲಕ್ಷ ಕ್ವಿಂಟಾಲ್, ಸಕ್ಕರೆ ಇಳುವರಿ ಪ್ರಮಾಣ ೧೧.೦೫ ಇದ್ದು, ೪.೪೫. ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದರು.

ಶಾಸಕ ರಾಜು ಕಾಗೆ ಮಾತನಾಡಿದರು. ಕಚೇರಿ ಅಧೀಕ್ಷಕ ಸುರೇಶ ಠಕ್ಕಣವರ ವರದಿ ಓದಿದರು. ಲೆಕ್ಕಾಧಿಕಾರಿ ಶಂಕರ ಗೋಠಖಿಂಡಿ, ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೊಡೆ, ನಿರ್ದೇಶಕರಾದ ಜಿ.ಎಂ.ತೆವರಮನಿ, ಎಸ್.ಡಿ.ನಂದೇಶ್ವರ, ಜಿ.ಎಂ.ಜತ್ತಿ, ಎಸ್.ಜೆ.ಪಾಟೀಲ, ಆರ್.ವಿ.ಕುಲಕರ್ಣಿ, ಎಸ್.ಎಸ್.ನಾಯಿಕ, ಎಂ.ಎಂ.ಗೋಠಖಿಂಡಿ, ಎಸ್.ಎಚ್.ನಾಯಿಕ, ಆರ್.ಎ.ಪಟ್ಟಣ, ಎಚ್.ಐ.ಜಗದೇವ, ಪಿ.ಸಿ.ಪಾಟೀಲ, ವಿ.ಎಂ.ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net