ಮುಂದಿನ ವಾರ ಗಜಪಡೆಗೆ ಭಾರ ಹೊರುವ ತಾಲೀಮು

dasara-elephants-2013
Dasara 2013: Weights of the elephants in kgs were - Arjuna, Gajendra, Balarama, Abhimanyu, Varalakshmi and Sarala
Published on

ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಭಾರ (ಮರಳಿನ ಮೂಟೆ) ಹೊರುವ ತಾಲೀಮು ಮುಂದಿನ ವಾರ ಆರಂಭವಾಗಲಿದೆ. ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಮಹೇಂದ್ರ, ಭೀಮ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಮೊದಲ ದಿನ ಅಭಿಮನ್ಯುಗೆ 300 ಕೆ.ಜಿ.ಯಷ್ಟು ಮರಳು ಮೂಟೆ ಹೊರಿಸಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ. ಬಳಿಕ ಒಂದೊಂದು ಆನೆಯೂ ಒಂದೊಂದು ದಿನ ಮರಳಿನ ಮೂಟೆ ಹೊರುವ ಮೂಲಕ ತಾಲೀಮು ನಡೆಸಲಿವೆ. ಹಂತ ಹಂತವಾಗಿ 800 ಕೆ.ಜಿ.ವರೆಗೆ ಭಾರ ಹೊರಿಸಲು ತೀರ್ಮಾನಿಸಲಾಗಿದೆ. ಬಳಿಕ ಅಂತಿಮ ಹಂತದಲ್ಲಿ ಚಿನ್ನದ ಅಂಬಾರಿ ಮಾದರಿಯ ಮರದ ಅಂಬಾರಿ ಹೊರಿಸಿ ತಾಲೀಮು ನಡೆಯಲಿದೆ. ಒಂದೊಂದು ಆನೆಯೂ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಸಿದ್ಧಗೊಳ್ಳಲಿವೆ.


ಎರಡು ಬಾರಿ ತಾಲೀಮು: ಇಂದು ಕೂಡ ಬೆಳಗ್ಗೆ ಮತ್ತು ಸಂಜೆ ಗಜಪಡೆ ತಾಲೀಮು ನಡೆಸಿದೆ. ಬೆಳಗ್ಗೆ ಅರಮನೆ ಅಂಗಳದಿಂದ ಆಯುರ್ವೇದ ಆಸ್ಪತ್ರೆ ವೃತ್ತದವರಗೆ ಹಾಗೂ ಸಂಜೆ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಿದೆ. ಸಂಜೆ 5 ಗಂಟೆ ಸುಮಾರಿಗೆ ಅರಮನೆ ಅಂಗಳದಿಂದ ತಾಲೀಮು ಆರಂಭಿಸಿದ ಗಜಪಡೆ, 6 ಗಂಟೆ ಒಳಗೆ ಬನ್ನಿಮಂಟಪ ತಲುಪಿತು. ಬಳಿಕ ಕೆಲಕಾಲ ಅಲ್ಲಿಯೇ ವಿಶ್ರಾಂತಿ ಪಡೆದು 7.30ಕ್ಕೆ ಅರಮನೆ ಅಂಗಳಕ್ಕೆ ಹಿಂದಿರುಗಿತು. ಭಾನುವಾರ ಭೀಮ ಆನೆ ನೇತೃತ್ವದಲ್ಲಿ ತಾಲೀಮು ನಡೆಯಿತು. ಕ್ಯಾಪ್ಟನ್ ಅಭಿಮನ್ಯು, ಹೊಸ ಆನೆ ಕಂಜನ್, ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯಾ ಹಾಗೂ ಗೋಪಿ, ಧನಂಜಯ, ಮಹೇಂದ್ರ ಒಳಗೊಂಡ ಗಜಪಡೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದವು.


ಜಲಮಜ್ಜನದಲ್ಲಿ ಮುಳುಗಿದ ಆನೆಗಳು!


ಬೆಳಗ್ಗೆ ತಾಲೀಮಿನ ನಂತರ ಗಜಪಡೆ ಜಲ ಮಜ್ಜನದಲ್ಲಿ ಮುಳುಗಿದ್ದವು. ಎಲ್ಲ ಆನೆಗಳಿಗೆ ಮಾವುತರು ಮತ್ತು ಕಾವಾಡಿಗಳು ಸ್ನಾನ ಮಾಡಿಸಿದರು. ಬಳಿಕ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ಸೇವಿಸಿದ ಆನೆಗಳು ಅರಮನೆ ಅಂಗಳದಲ್ಲಿ ಸಂಜೆಯವರೆಗೂ ರಿಲ್ಯಾಕ್‌ಗೆ ಜಾರಿದವು. ಸಂಜೆಯ ತಾಲೀಮಿನ ಬಳಿಕ ಗಜಪಡೆಗೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಯಿತು.


ಸೈ ಎನಿಸಿಕೊಳ್ಳುತ್ತಿದ್ದಾನೆ ಕಂಜನ್:

ಸಾಮಾನ್ಯವಾಗಿ ಮೊದಲ ಸಲ ನಗರಕ್ಕೆ ಬರುವ ಸಾಕಾನೆಗಳು ವಾಹನಗಳ ಸೈರನ್, ಜನರ ಗದ್ದಲ ಕಂಡರೆ ತುಸು ಹೆದರುತ್ತವೆ. ಕೆಲವು ಆನೆಗಳಂತೂ ರಸ್ತೆಗಿಳಿದರೆ ಸಾಕು ಘೀಳಿಡಲು ಶುರು ಮಾಡುತ್ತವೆ. ಕಾಡಿನಿಂದ ನಾಡಿಗೆ ಬಂದ ಕೂಡಲೇ ರಸ್ತೆ ತುಂಬ ವಾಹನ, ಜನರನ್ನು ಕಂಡಾಗ ಈ ರೀತಿ ವರ್ತಿಸುವುದು ಸಾಮಾನ್ಯ. ಆದರೆ, ದಸರೆಗೆ ಮೊದಲ ಬಾರಿಗೆ ಬಂದಿರುವ ಕಂಜನ್ ವಾಹನಗಳ ಸದ್ದಿಗೆ ಬೆದರುತ್ತಿಲ್ಲ. ಜನರನ್ನು ಕಂಡು ಘೀಳಿಡುತ್ತಿಲ್ಲ. ಶಾಂತಚಿತ್ತನಾಗಿ ತಾಲೀಮು ನಡೆಸುವ ಮೂಲಕ ಸೈ ಎನಿಸಿಕೊಳ್ಳತ್ತಿದ್ದಾನೆ. ಹಳೆಯ ಆನೆಗಳ ರೀತಿಯೇ ಕಂಜನ್ ಕೂಡ ಹೊಂದಿಕೊಂಡಿರುವುದು ವಿಶೇಷ.
ಸದ್ಯ ಹುಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಮಾಜಿ ಕ್ಯಾಪ್ಟನ್ ಅರ್ಜುನ ಶೀಘ್ರದಲ್ಲೇ ದಸರೆ ಗಜಪಡೆಯೊಂದಿಗೆ ಸೇರಲಿದ್ದಾನೆ. ದುಬಾರೆ ಶಿಬಿರದ ಹೊಸ ಆನೆ ಕಂಜನ್ ಕೂಡ ತಾಲೀಮಿನಲ್ಲಿ ಉತ್ತಮವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಡಿಸಿಎಫ್ ಸೌರಭ್ ಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮುಂದಿನ ವಾರ ಗಜಪಡೆಗೆ ಭಾರ (ಮರಳಿನ ಮೂಟೆ) ಹೊರುವ ತಾಲೀಮು ಆರಂಭಿಸಲಾಗುತ್ತದೆ. ಸದ್ಯ ಎಲ್ಲ ಆನೆಗಳು ಹೊಂದಿಕೊಂಡಿವೆ. ಹೊಸ ಆನೆ ಕಂಜನ್ ಕೂಡ ಹಳೆಯ ಆನೆಗಳ ರೀತಿಯೇ ವರ್ತಿಸುತ್ತಿದೆ. ಶೀಘ್ರದಲ್ಲೇ ಎರಡನೇ ತಂಡವನ್ನು ಕರೆತರಲಾಗುತ್ತದೆ.-ಸೌರಭ್ ಕುಮಾರ್, ಡಿಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net