ಸಾಹಿತ್ಯೇತರರನ್ನು ಪರಿಗಣಿಸುವುದು ಎಷ್ಟು ಸರಿ: ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಪ್ರಶ್ನೆ

Weekly guest program at Press Club Mandya
Published on

ಮಂಡ್ಯ: ಮೊಟ್ಟಮೊದಲ ಬಾರಿಗೆ ಮಹಿಳಾ ಲೇಖಕಿಯನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಮಂಡ್ಯ ಜಿಲ್ಲೆಗೆ ಸೇರಿದೆ. ಹೀಗಿರುವಾರ ಸಾಹಿತ್ಯೇತರರನ್ನು ಈ ಬಾರಿಯ ಸಮ್ಮೇಳನಾಧ್ಯಕ್ಷರನ್ನಾಗಿಸುವ ವಿಚಾರವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ತೇಲಿ ಬಿಟ್ಟಿದ್ದಾರೆ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಪರಿಗಣಿಸುವುದು ಎಷ್ಟು ಸರಿ ಎಂಬುದನ್ನು ಅವಲೋಕಿಸಿಕೊಳ್ಳಬೇಕಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಹೇಳಿದರು.

ಸಮ್ಮೇಳನ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ‘ವಾರದ ಅತಿಥಿ’ ಸಂವಾದದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಗಳಲ್ಲಿ ಮಾತ್ರ ಸಾಹಿತಿಗೆ ಆದ್ಯತೆ ದೊರೆಯುತ್ತದೆ. ಇತರೆ ಕ್ಷೇತ್ರಗಳಲ್ಲಿ ಸಾಹಿತಿಗಳು ಯಾರಿಗೂ ಕಾಣುವುದಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಸಣ್ಣ ಹಿನ್ನಡೆ ಕಾಣಲು ಸಾಹಿತಿಗಳನ್ನು ತೊಡಗಿಸಿಕೊಳ್ಳದೇ ಇರುವುದು. ತಮಿಳು, ಮಳಿಯಾಳಂ ಸಿನಿಮಾಗಳಲ್ಲಿ ಸಾಹಿತಿಗಳನ್ನು ತೊಡಗಿಸಿಕೊಳ್ಳುತ್ತಿದ್ದು, ರಾಷ್ಟ್ರಮಟ್ಟದ ಆದ್ಯತೆ ದೊರೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಹಾಗೂ ಸಾಹಿತ್ಯವನ್ನು ಬೇರೆ ಕ್ಷೇತ್ರಗಳಲ್ಲಿ ಅತ್ಯಂತ ಅವಗಣನೆಗೆ ಒಳಮಾಡಲಾಗಿದೆ. ಲೇವಡಿ ಮಾಡಿ ಸಾಹಿತಿಗಳನ್ನು ಕುಗ್ಗಿಸಲಾಗುತ್ತಿದೆ. ಜಾತ್ಯಾತೀತತೆ, ವೈಜ್ಞಾನಿಕತೆ ಸಾಹಿತಿಗಳಲ್ಲಿದೆ. ಇವುಗಳು ಚಾಲ್ತಿಗೆ ಬರುವುದನ್ನು ತಡೆಯಲು ಸಾಹಿತಿಗಳನ್ನು ಕುಗ್ಗಿಸುವ ಹುನ್ನಾರವಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸಾಹಿತಿಗಳು ನಿಜವಾದ ಧರ್ಮಿಯರು. 12ನೇ ಶತಮಾನದಲ್ಲಿ ಬಸವಣ್ಣ ಲಿಂಗಾಯತ ಧರ್ಮ ಕಟ್ಟಿದರೆ, ನಮ್ಮ ಕಾಲದ ಕವಿ ಕುವೆಂಪು ಅವರು ವಿಶ್ವಮಾನವ ಧರ್ಮ ಕಟ್ಟಿದ್ದಾರೆ. ದಯಯೇ ಧರ್ಮದ ಮೂಲವಾಗಿದ್ದು, ಇದನ್ನು ಬಿಟ್ಟು ಅಮಾನವೀಯ ವರ್ತನೆ ಸಾಹಿತಿಗಳಲ್ಲಿ ಇಲ್ಲ. ಮಾನವತಾ ಧರ್ಮವನ್ನು ಹೊಂದಿದ ಸಾಹಿತಿಯನ್ನು ಹೊರಗಿಟ್ಟು ಇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ವಿಚಾರನ್ನು ಒಪ್ಪುವುದಿಲ್ಲ. ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಅದು ಸಾಹಿತ್ಯಕ್ಕೆ ಮಾಡುವ ದೊಡ್ಡ ದ್ರೋಹ. ಆದ್ದರಿಂದ ಇಂತಹ ದುಸ್ಸಾಹಸಕ್ಕೆ ಅಧ್ಯಕ್ಷರು ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.

ಪರಿಷತ್‌ನ ಅಧ್ಯಕ್ಷರಾದವರು ಸಾಹಿತಿಗಳಾಗಿದ್ದರೆ, ನಿಜವಾದ ಓದುಗರಾಗಿದ್ದರೆ, ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವ ನಿರ್ಧಾರ ಕೈಗೊಳ್ಳುವುದಿಲ್ಲ. ಸಾಹಿತ್ಯದ ಗಂಧವೇ ಗೊತ್ತಿರದವರು ಇಂತಹ ನಿರ್ಧಾರ ಮಾಡುವರು. ಭಾಷಿಕ ಲೋಕ ಕಟ್ಟಬೇಕಾದ ಜವಾಬ್ದಾರಿ ಲೇಖಕರ ಮೇಲಿದೆ. ಪಂಪ, ಕುಮಾರವ್ಯಾಸ ಅವರಂತಹ ಕವಿಗಳ ಸಾಹಿತ್ಯಗಳನ್ನು ಬರೆಯದಿದ್ದರೆ ಕನ್ನಡವಿಲ್ಲ ಎಂದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಆದರೆ ಸಮ್ಮೇಳನಕ್ಕೆ ನೀಡುವ ಹಣವನ್ನು ಅವುಗಳ ಉದ್ದಾರಕ್ಕೆ ಬಳಕೆ ಮಾಡಲಿ. ಸಾಹಿತ್ಯ ಸಮ್ಮೇಳನ ತನಗೆ ತಾನೇ ಒಂದು ವೈಭವದ ಸಂಭ್ರಮ. ಸಮ್ಮೇಳನದಲ್ಲಿ ಹೆಚ್ಚಾಗಿ ಭಾಗವಹಿಸುವವರು ಶಿಕ್ಷಕರೇ ಆಗಿದ್ದಾರೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗ ನೀಡುವ ಶಿಕ್ಷಕರು ಪ್ರತಿನಿಧಿ ಶುಲ್ಕ ಪಾವತಿಸಿ ಭಾಗಿಯಾಗುತ್ತಾರೆ. ಕಾರ್ಮಿಕ ವಲಯ, ರೈತರು, ಆಟೋ ಚಾಲಕರು, ಬಸ್ ಚಾಲಕರು ಸೇರಿದಂತೆ ಅನೇಕರು ಕನ್ನಡದ ಮೇಲಿನ ಅಭಿಮಾನದಿಂದ ಭಾಗವಹಿಸುತ್ತಾರೆ ಎಂದರು.

ಪ್ರಸ್ತುತ ಸಾಹಿತ್ಯದಲ್ಲಿ ಬರವಣಿಗೆಗಳ ತೀಕ್ಷ್ಣತೆ, ತೀವ್ರತೆಯು ಬಹಳ ದಟ್ಟವಾಗಿ ಬರುತ್ತಿದೆ. ಎಚ್.ಎಲ್.ನಾಗೇಗೌಡ, ಜೀ.ಶಂ.ಪ, ಅರ್ಚಕ ರಂಗಸ್ವಾಮಿ ಅವರನ್ನು ನೆನಪಿಸಿಕೊಂಡಾಗ ಮಂಡ್ಯ ಸಾಂಸ್ಕೃತಿಕವಾಗಿ ಅತ್ಯಂತ ಮುಂಚೂಣಿಯಲ್ಲಿರುವ ಜಿಲ್ಲೆ. ಮುಖ್ಯವಾಗಿ ಈ ನೆಲೆದಲ್ಲಿ ಸೌಹಾರ್ಧತೆಯನ್ನು ಗಮನಿಸಬಹುದಾಗಿದೆ. ಜಿಲ್ಲೆಯ ಜನರ ಸಾಂಸ್ಕೃತಿಕ ಮನೋವೃತ್ತಿ ದೊಡ್ಡ ಮಟ್ಟದ್ದು, ಇಲ್ಲಿಯ ಜನರ ಹೃದಯ ಸಕ್ಕರೆಯಂತೆ ಮಧುವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಾದದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ಡಿ.ಎಲ್.ಲಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net