

ಹಾನಗಲ್ಲ: ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ವಾರದ ಸಂತೆ ಪುನರಾರಂಭಗೊಂಡಿದೆ. ಜನ ಸಂತೆಗೆ ಬರಲು ಅನುಕೂಲವಾಗುವಂತೆ ಉಚಿತ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಸಮ್ಮಸಗಿ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಾಮಾಜಿಕ ಕಾರ್ಯಕರ್ತ ಸಿದ್ದಲಿಂಗಪ್ಪ ಕಮಡೊಳ್ಳಿ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಉಚಿತ ವಾಹನಗಳ ವ್ಯವಸ್ಥೆ ಮಾಡಿ, ಹಳ್ಳಿಗಳಿಂದ ಜನ ಬಂದು ಸಂತೆ ಮಾಡಿಕೊಂಡು ಹೋಗಲು ಅನುಕೂಲ ಮಾಡಿಕೊಟ್ಟರು. ಇದರಿಂದ ಭಾನುವಾರ ನಡೆಯುವ ಸಂತೆಗೆ ಹೆಚ್ಚು ಜನ ಬರಲು ಸಾಧ್ಯವಾಯಿತು. ಒಂದು ತಿಂಗಳ ಕಾಲ ಈ ವ್ಯವಸ್ಥೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ಹಾನಗಲ್ಲ ಅತಿದೊಡ್ಡ ತಾಲೂಕಾಗಿದೆ. ತಾಲೂಕಿನ ದೊಡ್ಡ ದೊಡ್ಡ ಊರುಗಳಲ್ಲಿ ಸಂತೆ ನಡೆಯುವಂತಾದರೆ ಜನರಿಗೆ ಹೆಚ್ಚು ಅನುಕೂಲ. ಸಮಯ ಹಾಗೂ ಶ್ರಮದ ಉಳಿತಾಯವಾಗುತ್ತದೆ. ಸಮ್ಮಸಗಿಯಲ್ಲಿ ನಡೆಯುತ್ತಿದ್ದ ಸಂತೆ ಪುನರಾರಂಭವಾಗಿದ್ದು, ಅದಕ್ಕೆ ಉತ್ತಮ ಚಾಲನೆ ನೀಡಲು ನಾವು ಉಚಿತ ವಾಹನ ವ್ಯವಸ್ಥೆ ಮಾಡಿದ್ದರಿಂದ ಅತಿ ಹೆಚ್ಚು ಜನ ಸಂತೆಗೆ ಆಗಮಿಸಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ತಾಲೂಕಿನ ಜನರಿಗೆ ಅನುಕೂಲ ಆಗುವ ಕಾರ್ಯ ಮಾಡಲು ನಾವು ಸದಾ ಸಿದ್ಧ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹತ್ತು ಹಲವು ಸಮಸ್ಯೆ ಒಳಗೊಂಡು ಸಾರ್ವಜನಿಕರು ಪರದಾಡುತ್ತಿದ್ದಾರೆ. ಅದರಲ್ಲಿ ಸಂತೆಯೂ ಒಂದಾಗಿದೆ. ಹೀಗಾಗಿಯೇ ಜನರಿಗೆ ಹತ್ತಿರದ ಪ್ರದೇಶದಲ್ಲಿ ಆರಂಭವಾದ ಸಮ್ಮಸಗಿ ಸಂತೆಗೆ ಜನರ ಓಡಾಟಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ದೊಡ್ಡಮನಿ, ಉಪಾಧ್ಯಕ್ಷ ಮಾರುತಿ ಬೆಳ್ಳಿಕೊಪ್ಪ, ಸದಸ್ಯರಾದ ನವೀನ ದೇಶಪಾಂಡೆ, ಸರೋಜಾ ವಡ್ಡರ, ಗಣ್ಯರಾದ ಈರಣ್ಣ ನಿಂಬಣ್ಣನವರ, ರಮೇಶ ಕಳಸದ, ಸಿದ್ದನಗೌಡ ಪಾಟೀಲ, ಹನುಮಂತಪ್ಪ ಕೋಣನಕೊಪ್ಪ, ರಾಮು ಯಳ್ಳೂರ, ಪರಮೇಶ ದೊಡ್ಡಮನಿ, ಸಿದ್ದಲಿಂಗೇಶ ಪಾಟೀಲ, ಸುರೇಶ ಈಳಿಗೇರ, ಜಗದೀಶ ಸಿಂಧೂರ, ಗದಿಗೆಪ್ಪ ತಳವಾರ, ಸುಭಾಸ ತಳವಾರ, ಶಿವಾನಂದ ವಡ್ಡರ, ಮೂಕಪ್ಪ ಪಡೆಪ್ಪನವರ, ಮಾರುತಿ ಬೆಳ್ಳಿಕೊಪ್ಪ, ಸತೀಶ ಹೊಸಮನಿ, ನವೀನ ದೇಶಪಾಂಡೆ ಇತರರಿದ್ದರು.