

ಬೀರೂರು: ಬೈಪಾಸ್ ಕಾಮಗಾರಿ ಆರಂಭದ ಸಂದರ್ಭದಲ್ಲಿ ಆಗಿರುವ ತೊಡಕುಗಳಿಂದ ಇಂದು ಕೆರೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ವಾರದಲ್ಲಿ ಇದನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಕ್ರಮ ಕ್ರಮಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.
ಅಜ್ಜಂಪುರ ರಸ್ತೆಯಲ್ಲಿ ಕೆರೆ ನೀರು ಹರಿಯುತ್ತಿರು ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಬೈಪಾಸ್ ಕಾಮಗಾರಿಯ ಸಂದರ್ಭದಲ್ಲಿ ಸ್ಥಳೀಯ ಗ್ರಾಪಂನಿಂದ ಮಾಹಿತಿ ಪಡೆದು ಹಳ್ಳ, ಕೆರೆ, ರಸ್ತೆ ಬಗ್ಗೆ ಪರಿಶೀಲಿಸಿ ಕಾಮಗಾರಿ ಆರಂಭಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಅದನ್ನು ಏಕೆ ಮಾಡಲಿಲ್ಲ ಎಂದು ಯೋಜನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾರದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಯೋಜನಾಧಿಕಾರಿ ಅನೂಪ್ ಶರ್ಮಾಗೆ ಸೂಚಿಸಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಬೀರೂರು ಹೊರ ವಲಯದಲ್ಲಿ ಪ್ರಗತಿಯಲ್ಲಿರುವ ಬೈಪಾಸ್ ಕಾಮಗಾರಿಯಿಂದ ಕಾಲುವೆಗಳು ಮುಚ್ಚಿ ಗಾಳಿಹಳ್ಳಿ ಕೆರೆ ತುಂಬಿ ನೀರು ಸರಾಗವಾಗಿ ಮುಂದಕ್ಕೆ ಹರಿಯದೇ ಅಜ್ಜಂಪುರ ರಸ್ತೆ ಮೇಲೆ ಹರಿಯುತ್ತಿದೆ. ಹೆದ್ದಾರಿ ಇಲಾಖೆಯವರು ಮಾಡಿರುವ ತಪ್ಪಿನಿಂದ ಈ ಸಮಸ್ಯೆ ಎದುರಾಗಿದೆ ಎಂದರು.
ರಹೀಂ ಸಾಬ್ ಬಡಾವಣೆ ಪ್ರವೇಶದಿಂದ ರಸ್ತೆಯ ಎರಡು ಭಾಗಗಳಲ್ಲಿ ಕಾಲುವೆ ತೆಗೆದು ಅದನ್ನು ದೊಡ್ಡ ಕಾಲುವೆಗೆ ಹರಿಸಲು ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಶೀಘ್ರವಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದರು.
ಅಜ್ಜಂಪುರ ರಸ್ತೆಯ ಸ್ಥಳ ಪರಿಶೀಲನೆಗೂ ಮೊದಲು ಸಂಸದರು, ಶಾಸಕರು ಸರಸ್ವತಿಪುರಂ ಬಡಾವಣೆಯ ಶ್ರೀ ಮೈಲಾರಲಿಂಗ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯದ ಆವರಣದಲ್ಲಿ ಅಗತ್ಯವಾಗಿರುವ ಹೊರಾಂಗಣದ ಮೇಲ್ಛಾಣಿಯನ್ನು ಶಾಸಕರು ಮತ್ತು ಸಂಸದರ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಪೂರ್ಣಿಮಾ, ಬೀರೂರು ದೇವರಾಜ್, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಸಮೀವುಲ್ಲಾ, ಜಿಲ್ಲಾ ಯೋಜನಾಧಿಕಾರಿ ಅನೂಪ್ ಶರ್ಮಾ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ರಾಮಲಿಂಗಂ ಮತ್ತು ರೈತ ಮುಖಂಡರಾದ ಬಾಸೂರು ರವಿ, ಯತೀಶ್ ಇದ್ದರು.