

ಮಂಡ್ಯ: ಪ್ರಸ್ತುತ ಸನ್ನಿವೇಶದಲ್ಲಿ ರಾಜಕಾರಣಿಗಳನ್ನು ನಂಬಬಹುದು. ಆದರೆ ಸಾಹಿತಿಗಳನ್ನು ನಂಬುವುದು ಕಷ್ಟ. ಇಂದು ಶೇ.60ರಷ್ಟು ಸಾಹಿತಿಗಳಲ್ಲಿ ಜಾತಿ, ಗುಂಪುಗಾರಿಕೆ, ಅಸೂಯೆ ಹೆಚ್ಚು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಕವಿ ಪಂಪ 10ನೇ ಶತಮಾನದಲ್ಲಿ ’ಮನುಜ ಕುಲಂ ತಾನೊಂದೆ ವಲಂ’ ಎಂದು ಹೇಳಿದರೆ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ ಸಾರಿದರು. 15ನೇ ಶತಮಾನದಲ್ಲಿ ದಾಸರು ’ಕುಲ ಕುಲವೆಂದು ಹೊಡೆದಾಡದಿರಿ’. 20ನೇ ಶತಮಾನದಲ್ಲಿ ಕುವೆಂಪು ’ವಿಶ್ವಮಾನವ’ ಸಂದೇಶ ನೀಡಿದರು. ಆದರೂ ಸಹ ಜಾತೀಯತೆ ಹೋಗಲಾಡಿಸಲು ಸಾಧ್ಯವಾಗಿಲ್ಲ. ಸಾಹಿತಿಗಳಲ್ಲಿ ಅಸೂಯೆ ದ್ವೇಷ ಹೆಚ್ಚು. ಯಾರಿಗಾದರೂ ಪ್ರಶಸ್ತಿ ಬಂದರೆ, ಏಳಿಗೆಯಾದರೆ ಸಹಿಸಿಕೊಳ್ಳುವುದಿಲ್ಲ ಎಂದು ವಾಸ್ತವತೆ ಬಿಚ್ಚಿಟ್ಟರು.
ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದಲ್ಲದೆ, ಏಳು ತಾಲೂಕುಗಳಲ್ಲಿ ಪುಸ್ತಕ ಮಾರಾಟ ಮಾಡಲಾಯಿತು. ತಳ್ಳುವ ಗಾಡಿಯಲ್ಲಿ ಪುಸ್ತಕ ಮಾರಾಟ ಮಾಡಿದ್ದು ನೆನಪಿದೆ. ಅದರ ಶೇ.25ರಷ್ಟು ಕಮಿಷನ್ ಹಣದಲ್ಲಿ ಕಾರ್ಯಕ್ರಮ ರೂಪಿಸಲಾಯಿತು. ಎಸ್.ಡಿ.ಜಯರಾಂ ಅವರ ಸಹಕಾರದಿಂದ ಲೇಖಕಿಯರ ಸಮ್ಮೇಳನ ನಡೆಸಲಾಗಿತ್ತು. 2500 ಜನರು ಭಾಗವಹಿಸಿದ್ದರು. 1978ರಲ್ಲಿ ಬಿಎಂಶ್ರೀ ವಿಚಾರ ಸಂಕಿರಣ ನಡೆಸಿ ’ಸಂಭಾವನೆ’ ಗ್ರಂಥ ಸಮರ್ಪಣೆ ಮಾಡಲಾಯಿತು. ತಮ್ಮ ಒಂಬತ್ತು ವರ್ಷದ ಅವಧಿಯಲ್ಲಿ 650 ಕಾರ್ಯಕ್ರಮ ಮಾಡಿದ್ದೇವೆ. ಮಂಡ್ಯ ಜನತೆಯ ಬೆಂಬಲ, ಸಹಕಾರ ಮರೆಯುವಂತಿಲ್ಲ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಲಿ: ಸಾಹಿತ್ಯೇತರ ಎಂಬ ಗಾಳಿಮಾತು ಎಲ್ಲಿಂದ ಬಂತೋ ಗೊತ್ತಿಲ್ಲ. ವಿವಾದಗಳು ನಮ್ಮಿಂದಲೇ ಸೃಷ್ಟಿಯಾಗುತ್ತಿವೆ. ಸಂಗೀತ ಸಮ್ಮೇಳನಕ್ಕೆ ಸಂಗೀತಗಾರರೇ ಅಧ್ಯಕ್ಷರಾಗುವ ರೀತಿ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಈಗ ನಿಗದಿಪಡಿಸಿರುವ ಸ್ಥಳ ಸಮ್ಮೇಳನಕ್ಕೆ ಸೂಕ್ತವಾಗಿದೆ. ಸಾಹಿತ್ಯ ಸಮ್ಮೇಳನದ ಸಾರ ಜನರನ್ನು ಮುಟ್ಟಬೇಕು. ಊಟಕ್ಕಿಂತ ಹೆಚ್ಚಾಗಿ ಸಾಹಿತ್ಯದ ರಸದೌತಣ ಉಣಬಡಿಸಬೇಕು. ಉತ್ತಮ ವಿಚಾರಗಳು ಚರ್ಚೆ ಆಗಬೇಕು. ಹೆಚ್ಚು ರೈತರು ಇರುವ ಜಿಲ್ಲೆಯಾದ ಮಂಡ್ಯದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ವಿಷಯ ಚರ್ಚೆಯಾಗಬೇಕು. ಸಾಹಿತ್ಯ ಪರಿಷತ್ ಸಮ್ಮೇಳನ ಮಾಡಿ ಸುಮ್ಮನಿದ್ದರೆ ಸಾಲದು, ವರ್ಷವಿಡೀ ಕಾರ್ಯಕ್ರಮ ರೂಪಿಸಬೇಕು. ರನ್ನ, ಜನ್ನ, ಪೊನ್ನ ಇಂತವರ ಹಳಗನ್ನಡವನ್ನು ಮರೆಯಬಾರದು. ಅದನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಹಣ ಹೆಚ್ಚು ಬಂದಷ್ಟು ಖರ್ಚಿನ ಮಿತಿ ಏರುತ್ತದೆ. ಇಂದಿನ ಸಂದರ್ಭಕ್ಕೆ 15 ರಿಂದ 20 ಕೋಟಿ ರೂ ಸಾಕು. ಅತಿ ಹೆಚ್ಚಿನ ಅದ್ದೂರಿತನ ಬೇಡ. ಏಳು ಕ್ಷೇತ್ರದ ಶಾಸಕರು ಸೇರಿ ಸಮ್ಮೇಳನಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಮಾಡಿಸಬಹುದು. ಉಳಿದ ಹಣವನ್ನು ಇತರೆ ವ್ಯವಸ್ಥೆಗೆ ಬಳಸಬಹುದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಗೆ ಹಂಪನಾ ಹೆಸರು ಪರಿಗಣಿಸಿ: ಹಂಪನಾಗರಾಜಯ್ಯ ಅವರು ದೊಡ್ಡ ವಿದ್ವಾಂಸರು. ಅವರ ವಿದ್ಯಾಭ್ಯಾಸ ಮಂಡ್ಯದಲ್ಲಿ ನೆರವೇರಿದೆ. ಅವರ ಶಿಷ್ಯರು ಹಲವಾರು ಜನರಿದ್ದಾರೆ. ಹಳಗನ್ನಡ ಕಾವ್ಯದಲ್ಲಿ ಪರಿಣತಿ ಹೊಂದಿರುವ ಅವರ ಬಗ್ಗೆ ದೇಶ ವಿದೇಶದಲ್ಲಿ ಪಾಂಡಿತ್ಯದ ಪರಿಚಯವಿದೆ.70-80 ಕೃತಿಗಳನ್ನು ರಚಿಸಿದ್ದಾರೆ. ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹಿಂದೆ ಒಮ್ಮೆ ನಮ್ಮ ಮನೆಗೆ ಬಂದಿದ್ದರು. ಆಗ ಅವರ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ಇತ್ತೀಚೆಗೆ ಅವರದು ಏಕಸ್ವಾಮ್ಯ. ಒಂದು ರೀತಿ ಚಕ್ರಾಧಿಪತ್ಯ ಎನಿಸುತ್ತದೆ. ಇದು ಒಂದು ರೀತಿ ಕೆಟ್ಟದ್ದು. ಅದರ ಪರಿಣಾಮವಾಗಿ ಗೊಂದಲ ಉಂಟಾಗುತ್ತಿದೆ. ಸಲಹೆ ಸ್ವೀಕರಿಸುವ ಧೋರಣೆ ಮುಖ್ಯವಾಗಬೇಕು. ಹಾಗಾದಾಗ ಗೊಂದಲ ಕಡಿಮೆಯಾಗುತ್ತದೆ. ಇನ್ನೂ ಕಾಲಾವಕಾಶವಿದೆ. ಎಲ್ಲರ ಸಲಹೆ ಸೂಚನೆ ಸ್ವೀಕರಿಸಿ ಒಳ್ಳೆಯ ರೀತಿ ನಡೆದುಕೊಂಡರೆ ಒಳ್ಳೆಯದು. ವಿದೇಶದಲ್ಲಿ ಹೋಗಿ ಅವರಿವರನ್ನು ಭೇಟಿ ಮಾಡುವುದಕ್ಕಿಂತ ಬೆಂಗಳೂರಿನಲ್ಲಿ ತ್ರಿವೇಣಿ ಮಗಳು ಇದ್ದಾರೆ. ಅವರಿಗೆ ಆಹ್ವಾನವೇ ಹೋಗಿಲ್ಲ. ವಿದೇಶದಲ್ಲಿರುವ ವಿಶ್ವೇಶ್ವರಯ್ಯ ಅವರ ಮೊಮ್ಮಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ವಿದೇಶಕ್ಕೆ ಆಹ್ವಾನ ನೀಡಲು ಹೋಗಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಸಂವಾದದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ನವೀನ್‌ಕುಮಾರ್, ಖಜಾಂಚಿ ನಂಜುಂಡಸ್ವಾಮಿ ಇದ್ದರು.