

ಶ್ರೀರಂಗಪಟ್ಟಣ: ಅಯೋಡಿನ್ ನಿಸರ್ಗದತ್ತವಾಗಿ ದೊರೆಯುವ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ಇದು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ತಿಳಿಸಿದರು.
ಪಟ್ಟಣದ 15ನೇ ವಾರ್ಡಿನ ಕಾವೇರಿಪುರ(ಹಳೇ ಸಂತೇಮಾಳ)ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪ್ಪು ಮಾನವನ ಜೀವನದಲ್ಲಿ ಅಮೂಲ್ಯವಾದ ಒಂದು ನೈಸರ್ಗಿಕ ಪೋಷಕಾಂಶವಾಗಿದೆ. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಕತನ, ಮೆಳ್ಳೆಗಣ್ಣು, ಕುಬ್ಜತನ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಉಂಟಾಗುತ್ತವೆ ಹಾಗೂ ವಯಸ್ಕರಲ್ಲಿ ಗಳಗಂಡ, ಗೊಗ್ಗರು ದ್ವನಿ, ದೇಹದಲ್ಲಿ ಬಾವು, ಸ್ಥೂಲಕಾಯ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯದ ಆಹಾರದಲ್ಲಿ ಅಯೋಡಿನ್ ಉಪ್ಪನ್ನೇ ಬಳಸಿರಿ ಮತ್ತು ಅದರ ಕೊರತೆಯಿಂದಾಗುವ ನ್ಯೂನತೆಗಳನ್ನು ತಡೆಗಟ್ಟುವಂತೆ ಸಲಹೆ ನೀಡಿದರು.
ಸಾಂಕ್ರಾಮಿಕ ರೋಗ ಶಾಸ್ತ್ರಜ್ಞೆ ಮೇಘನಾ ಮಾತನಾಡಿ, ಗರ್ಭಿಣಿಯರಿಗೆ ಅಯೋಡಿನ್ ಕೊರತೆ ತೀವ್ರವಾಗಿದ್ದರೆ ಹುಟ್ಟುವ ಮಗುವಿನಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆ, ಪದೇ ಪದೆ ಗರ್ಭಪಾತ, ಥೈರಾಡ್ ಸಮಸ್ಯೆ, ನಿರ್ಜೀವ ಶಿಶುವಿನ ಜನನ ಆಗುತ್ತವೆ. ಹಾಗೆಯೇ ಖರೀದಿಸಿದ ಅಯೋಡಿನ್ ಉಪ್ಪನ್ನು ಗಾಳಿ ಬೆಳಕಿಗೆ ತೆರೆದಿಡದೆ ಸುರಕ್ಷಿತವಾಗಿ ರಕ್ಷಿಸಿಡಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಅಯೋಡಿನಯುಕ್ತ ಉಪ್ಪು ನಿಮ್ಮ ಮಕ್ಕಳ ಹಾಗೂ ಕುಟುಂಬದ ಸಂರಕ್ಷಕವಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳಾ ಅವರು ಉಪ್ಪಿನ ಮಾದರಿ ಪರೀಕ್ಷಿಸಿ ಪ್ರಾತ್ಯಕ್ಷಿಕೆ ಮೂಲಕ ಗುಣಮಟ್ಟದ ಅಯೋಡಿನ್ ಉಪ್ಪಿನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗಿನಾ, ಗಾಯತ್ರಿ, ಪೂಜಾ, ಭಾಗ್ಯಮ್ಮ, ನಾಗಮ್ಮ, ಮಹಾಲಕ್ಷ್ಮೀ, ಕೆ.ಆಶಾರಾಣಿ, ಅಂಗನವಾಡಿ ಕಾರ್ಯಕರ್ತೆ ಎನ್.ವೇದಾವತಿ, ಆಶಾ ಕಾರ್ಯಕರ್ತೆ ಮೀನಾ ಇದ್ದರು.