ವಾಹನ ತಾಪಸಣೆ ವೇಳೆ ಸೋಂಕಿತ ಪ್ರತ್ಯಕ್ಷ: ತಬ್ಬಿಬ್ಬಾದ ಪೊಲೀಸರು

25 smg 9
Published on

ಶಿವಮೊಗ್ಗ: ವಾರಾಂತ್ಯ ಕರ್ಫ್ಯೂ ವೇಳೆ ಪೊಲೀಸರ ಮುಂದೆ ಕರೊನಾ ಸೋಂಕಿತ ಪ್ರತ್ಯಕ್ಷನಾಗಿ ಬೆಚ್ಚಿಬೀಳಿಸಿದ್ದಾನೆ.

ಹೌದು, ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಬೆಳಗ್ಗೆಯಿಂದಲೂ ಸಂಚಾರ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಮಧ್ಯಾಹ್ನ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಪೊಲೀಸರು ಅಡ್ಡಗಟ್ಟಿ ಪ್ರಶ್ನಿಸಿದರು. ಈ ವೇಳೆ ನನಗೆ ಕರೊನಾ ಪಾಸಿಟಿವ್ ಬಂದಿದೆ. 14 ದಿನ ಮನೆಯಲ್ಲಿ ಕ್ವಾರಂಟೈನ್ ಇರುವಂತೆ ಹೇಳಿ ಮೆಗ್ಗಾನ್ ಆಸ್ಪತ್ರೆ ವೈದ್ಯರು ವರದಿ ಕೊಟ್ಟಿದ್ದಾರೆಂದು ಪೊಲೀಸರಿಗೆ ತೋರಿಸಿದ.

ವರದಿ ನೋಡಿದ ಸಂಚಾರ ಪೊಲೀಸರು ಗಲಿಬಿಲಿಗೊಂಡರು. ದಾಖಲೆಗಳ ಪರಿಶೀಲನೆ ವೇಳೆ ಪಾಸಿಟಿವ್ ಇರುವುದನ್ನು ಕಂಡು ದಂಗಾದ ಪೊಲೀಸರು, ಪಾಸಿಟಿವ್ ಇದ್ದವರು ರಸ್ತೆಯಲ್ಲೇಕೆ ಓಡಾಡ್ತಿದ್ದೀರಾ ಎಂದು ಪ್ರಶ್ನಿಸಿದರು. ಈಗಷ್ಟೇ ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದು ಸೋಂಕಿತ ಉತ್ತರಿಸಿದ. ಇದರಿಂದ ಸುತ್ತಮುತ್ತ ಇದ್ದ ಪೊಲೀಸರು, ವಾಹನಗಳ ದಾಖಲೆ ತೋರಿಸಲು ನಿಂತಿದ್ದವರು ವೈರಸ್ ನೆನಪಿಸಿಕೊಂಡು ಕಂಗಾಲಾದರು. ತಕ್ಷಣ ಪೊಲೀಸರು ಅವನನ್ನು ಮನೆಗೆ ಹೋಗುವಂತೆ ಕಳಿಸಿ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿ ಉಳಿದ ಪೊಲೀಸರಿಗೆ ಅಲರ್ಟ್ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net