ಲಾಕ್‌ಡೌನ್‌ನಲ್ಲಿ ಮುಗಿದ ವೀಕೆಂಡ್

7
Published on

ಮೈಸೂರು: ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಭಾನುವಾರ ಸ್ತಬ್ಧಗೊಂಡಿತ್ತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ವ್ಯಾಪಾರ-ವಹಿವಾಟು ಬಂದ್ ಆಗಿತ್ತು.

ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ನಗರದ ಜನತೆ ಬೆಂಬಲ ನೀಡಿದ್ದು, ಆರ್ಥಿಕ ಸಂಕಷ್ಟದ ನಡುವೆಯೂ ವ್ಯಾಪಾಸ್ಥರು ಆರ್ಥಿಕ ಚಟುವಟಿಕೆ ಸ್ಥಗಿತಗೊಳಿಸಿ ಸರ್ಕಾರದ ಆದೇಶ ಪಾಲಿಸಿದರು.

ಕಳೆದ ಎರಡು ತಿಂಗಳಿಂದಲೂ ಲಾಕ್‌ಡೌನ್ ಮುಂದುವರಿಯುತ್ತಿದೆ. ಈ ನಡುವೆ ಮೇ 14ರಿಂದ ನಗರದಲ್ಲಿ ವ್ಯಾಪಾರ ವಹಿವಾಟಿಗೆ ವಿನಾಯಿತಿ ನೀಡಲಾಗಿದೆ. ನಗರದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಚೇತರಿಕೆಯತ್ತ ಸಾಗಿವೆ. ಈ ಮಧ್ಯೆ, ಭಾನುವಾರ ಮತ್ತೆ ಸಂಪೂರ್ಣ ಲಾಕ್‌ಡೌನ್‌ಅನ್ನು ಜನರ ಮೇಲೆ ಹೇರಿರುವುದು ಕೆಲವರ ಸಿಟ್ಟಿಗೆ ಕಾರಣವಾಗಿದೆ. ‘ವಾರದ ಆರು ದಿನವೂ ವಿನಾಯಿತಿ ನೀಡಿ, ಒಂದು ದಿನ ನಿರ್ಬಂಧ ಹೇರಿದರೆ ಕರೊನಾ ತಡೆಯಲು ಏನು ಪ್ರಯೋಜನವಾಗಲ್ಲ’ ಎಂದು ಕೆಲವರು ಅಭಿಪ್ರಾಯಿಸಿದರು.

ಅಗತ್ಯ ಸೇವೆಗಿಲ್ಲ ಧಕ್ಕೆ: ಅಗತ್ಯ ಸೇವೆಗಳ ಯಥಾಸ್ಥಿತಿ ಲಾಕ್‌ಡೌನ್‌ನಲ್ಲೂ ಮುಂದುವರಿಯಿತು. ಹಾಲು, ತರಕಾರಿ-ಹಣ್ಣು, ದಿನಸಿ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಆದರೆ, ನಿತ್ಯದ ಉತ್ಸಾಹ ಕಾಣಲಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಮುಖ ಮಾಡಲಿಲ್ಲ. ಭಾನುವಾರ ರಜೆ ಹಿನ್ನೆಲೆಯಲ್ಲಿ ಚಿಕನ್, ಮಟನ್, ಮೀನು ಖರೀದಿಗೆ ಜನರು ಮಾಂಸದಂಗಡಿ ಎದುರು ಸಾಲುಗಟ್ಟಿದ್ದರು.
ಆಸ್ಪತ್ರೆ, ಔಷಧ ಅಂಗಡಿಗಳು ತೆರೆದು ಸಾರ್ವಜನಿಕರಿಗೆ ಸೇವೆ ಕಲ್ಪಿಸಿಕೊಟ್ಟವು. ಕೆಲ ಕಡೆ ಮದುವೆ ಕಾರ್ಯಕ್ರಮಗಳೂ ಸರಳವಾಗಿ ನೆರವೇರಿದ್ದವು.

ಸಾರ್ವಜನಿಕರ ಸಂಚಾರ, ವಾಣಿಜ್ಯ ಮಳಿಗೆಗಳು, ಬಾರ್, ಸಲೂನ್, ಉದ್ಯಾನ, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಬಂದ್ ಆಗಿದ್ದವು. ಮೇ 19ರಿಂದ ಇತಿಮಿತಿಯಲ್ಲೇ ಸಂಚಾರ ನಡೆಸಿದ ಕೆಎಸ್‌ಆರ್‌ಟಿಸಿ ಬಸ್‌ಗಳೂ ರಸ್ತೆಗಿಳಿಯಲಿಲ್ಲ. ಇದರಿಂದ ಗ್ರಾಮಾಂತರ, ನಗರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.. ಬಸ್ ಸಂಚಾರವಿಲ್ಲದಿದ್ದರಿಂದ ಉಭಯ ಸಾರಿಗೆ ವಿಭಾಗಗಳಿಗೆ ಮತ್ತಷ್ಟು ನಷ್ಟ ಹೆಚ್ಚಾಗಿದೆ.

ಭಣಗುಟ್ಟಿದ ರಸ್ತೆಗಳು: ಶಿವರಾಮಪೇಟೆ, ಚಿಕ್ಕಗಡಿಯಾರ ವೃತ್ತ, ಸಂತೇಪೇಟೆ, ಡಿ.ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆ, ಕೆ.ಆರ್. ವೃತ್ತ, ಅಶೋಕರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ ಸೇರಿದಂತೆ ಇನ್ನಿತರ ರಸ್ತೆ, ವೃತ್ತಗಳು ಜನರಿಲ್ಲದೇ ಭಣಗುಟ್ಟುತ್ತಿದ್ದವು.

ಮಾರುಕಟ್ಟೆ ಬಳಿ ವ್ಯಾಪಾರಸ್ಥರು ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸುಳಿಯಲಿಲ್ಲ. ನಗರದ ವಸ್ತುಪ್ರದರ್ಶನ ಆವರಣದ ಮಾರುಕಟ್ಟೆದಲ್ಲಿ ಕೇವಲ ಒಂದು ಗಂಟೆ ಮಾತ್ರ ವ್ಯಾಪಾರ ನಡೆಯಿತು. ಬಳಿಕ ಇದು ಕೂಡ ಖಾಲಿ ಹೊಡೆಯುತ್ತಿತ್ತು.
ನಗರದ ಕೆಲ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಅರಮನೆ ಸುತ್ತಲಿನ ಪ್ರದೇಶ, ಪ್ರಮುಖ ರಸ್ತೆಯಲ್ಲಿ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದ ಜನರನ್ನು ತಡೆದು ವಿಚಾರಣೆ ಮಾಡಿದರು. ಉಳಿದ ಕಡೆಗೆ ಪೊಲೀಸರ ಸುಳಿವು ಇರಲಿಲ್ಲ.

ಸೈಕಲ್ ಸವಾರನ ವಾಗ್ವಾದ: ಮಾಸ್ಕ್ ಧರಿಸುವಂತೆ ಸೂಚಿಸಿದ ಪೊಲೀಸರೊಂದಿಗೆ ಹವ್ಯಾಸಿ ಸೈಕಲ್ ಸವಾರರೊಬ್ಬರು ವಾಗ್ವಾದಕ್ಕೆ ಇಳಿದಿದ್ದರು. ಸಯ್ಯಜಿರಾವ್ ರಸ್ತೆಯ ಆಯುರ್ವೇದಿಕ್ ವೃತ್ತದಲ್ಲಿ ಈ ಇದು ನಡೆಯಿತು. ‘ನಾನು ವೈದ್ಯ. ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ’ ಎಂದು ಮೊಬೈಲ್ ಮೂಲಕ ಮಾರ್ಗಸೂಚಿಯನ್ನು ಪೊಲೀಸರಿಗೆ ತೋರಿಸಿದರು. ಅವರಿಗೆ ತಿಳಿ ಹೇಳಿ ಅಲ್ಲಿಂದ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net