ಅಂತರಘಟ್ಟೆ, ಬೀರೂರಲ್ಲಿ ವಾರದ ತೆಂಗಿನ ಕಾಯಿ ಸಂತೆ ಆರಂಭ

k.s.anand- congress Kadur
Published on

ಕಡೂರು: ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಸಹಕಾರಿಯಾಗುವಂತೆ ಈ ಹಿಂದೆ ಸ್ಥಗಿತಗೊಂಡಿದ್ದ ವಾರದ ತೆಂಗಿನ ಕಾಯಿ ಸಂತೆಯನ್ನು ಅಂತರಘಟ್ಟೆ ಮತ್ತು ಬೀರೂರು ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಮತ್ತೆ ಆರಂಭಿಸಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಮಂಗಳವಾರ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೆ ಮಲೆನಾಡು ಪ್ರದೇಶವಾದ ಕಡೂರು ತಾಲೂಕಿನಲ್ಲಿ ತೆಂಗು ಪ್ರಮುಖ ಬೆಳೆಯಾಗಿದೆ. ಪ್ರಾಕೃತಿಕ ಸಮಸ್ಯೆಗಳು, ತೀವ್ರ ಬರಗಾಲ, ಬೆಲೆ ಕುಸಿತ, ಉತ್ಪಾದನೆಯಲ್ಲಿ ಕುಸಿತ ಮುಂತಾದ ಸಮಸ್ಯೆಗಳಿಂದ ರೈತರು ಕಂಗೆಟ್ಟಿದ್ದಾರೆ ಎಂದರು.

ತೆಂಗಿನಕಾಯಿ ಮಾರಾಟ ಮಾಡಲು ರೈತರು ಈ ಮೊದಲು ಎಪಿಎಂಸಿಗೆ ಬರುತ್ತಿದ್ದರು. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸಂತೆ ನಿಂತುಹೋಗಿ ರೈತರು ತೊಂದರೆಗೊಳಗಾಗಿದ್ದರು. ನಂತರ ಕೇಂದ್ರದ ಆದೇಶವನ್ನು ರಾಜ್ಯಸರ್ಕಾರ ತಿರಸ್ಕರಿತು. ಬಹಳಷ್ಟು ಕಡೆ ರೈತರು ವಾರದ ಸಂತೆ ಪ್ರಾರಂಭಿಸಲು ಒತ್ತಾಯ ಮಾಡುತ್ತಿದ್ದರು. ಆದ್ದರಿಂದ ಎಪಿಎಂಸಿ ಮೂಲಕ ಅಂತರಘಟ್ಟೆ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಗುರುವಾರ ಮತ್ತು ಬೀರೂರು ಉಪಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಶನಿವಾರ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈತರು ತೆಂಗಿನಕಾಯಿಗಳನ್ನು ನಿಗದಿತ ಸಮಯದೊಳಗೆ ಸಂತೆಗೆ ತೆರಳಿ ಮದ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕೃತ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು. ವರ್ತಕರೂ ಸಹ ಈ ಸಂತೆಗಳಲ್ಲಿ ರೈತರಿಂದ ತೆಂಗಿನಕಾಯಿ ಖರೀದಿಸಬೇಕು ಎಂದು ಮನವಿ ಮಾಡಿದರು. ಸಂತೆ ಮತ್ತೆ ಆರಂಭವಾಗುವುದುರಿಂದ ತೆಂಗುಬೆಳೆಗಾರರಿಗೆ ತುಸು ನೆಮ್ಮದಿ ದೊರೆಯಲಿದೆ ಎಂಬುದು ನಮ್ಮ ಆಶಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net