

ಮಡಿಕೇರಿ
ಮನೆ, ಮಠ, ಮಂದಿರ, ಮಸೀದಿ, ಚರ್ಚ್ಗಳನ್ನು ಕಟ್ಟುವುದಕ್ಕಿಂತ ಮೊದಲು ಮನಸುಗಳನ್ನು ಕಟ್ಟುವ ಕೆಲಸ ಆಗಬೇಕಿದೆ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಆಯುಧಪೂಜೆ ಹಿನ್ನೆಲ್ಲೆಯಲ್ಲಿ ಮಡಿಕೇರಿ ದಸರಾ ಸಮಿತಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ದಸರಾ ಎಂದರೆ ಗ್ರಾಮೀಣ ಸೊಗಡನ್ನು ಹಂಚುವ ಕಾರ್ಯಕ್ರಮ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವುದನ್ನು ಪ್ರತಿನಿಧಿಸುವ ಹಬ್ಬವಾದರೂ ಆಂತರಿಕ ಬದಲಾವಣೆಗಳಿಗೆ, ಅಂತರAಗದ ಹೊಸ ವಿಚಾರಗಳಿಗೆ ಹೊಸ ಅಧ್ಯಾಯವನ್ನು ನಿರ್ಮಾಣ ಮಾಡಿಕೊಡುವ ವೇದಿಕೆಯೂ ಇದಾಗಿದೆ. ಧರ್ಮದ ಆಂತರಿಕ ತಿರುಳನ್ನು ತಿಳಿದುಕೊಂಡು ಪ್ರೀತಿ ವಿಶ್ವಾಸದ ಬಾಳನ್ನು ಬದುಕದಿರುವ ಸಂದರ್ಭದಲ್ಲಿ ಕೋಮು ದಳ್ಳುರಿಗೆ ಅವಕಾಶ ಆಗುತ್ತದೆ. ಇದರಿಂದ ಎಲ್ಲಾ ಕಡೆಗಳಲ್ಲೂ ಪ್ರಕ್ಷÄಬ್ಧ ವಾತಾವರಣ ನಿರ್ಮಾಣ ಆಗುತ್ತದೆ. ಬದಲಾವಣೆ ಆಂತರಿಕವಾಗಿ ಆಗಬೇಕು. ಮನಸ್ಸುಗಳಲ್ಲಿ ಪ್ರೀತಿ ವಿಶ್ವಾಸ ತುಂಬಬೇಕು. ಜಾತಿಯ ಭಾವನೆ ಹೋಗಿ ಪ್ರೀತಿಯ ಭಾವನೆ ಮೂಡಿಸುವ ಕೆಲಸ ಆಗಬೇಕು. ಇದೆಲ್ಲದಕ್ಕೂ ದಸರಾ ಹಬ್ಬ ಮೂಲ ಪ್ರೇರಣೆ ಆಗಲಿ ಎಂದು ಆಶಿಸಿದರು.
ಸುಂಟಿಕೊಪ್ಪದ ಮುಸ್ಲಿಂ ಧರ್ಮಗುರು ಅಬ್ದುಲ್ ಹಮೀದ್ ಮೌಲ್ವಿ ಮಾತನಾಡಿ ಭಾರತದ ಪರಂಪರೆ ಮತ್ತು ಇತಿಹಾಸ ಸೌಹಾರ್ದಮಯವಾಗಿದೆ. ಇಲ್ಲಿ ಆಗಿಹೋದ ಋಷಿಮುನಿಗಳು, ಧಾರ್ಮಿಕ ಪ್ರಮುಖರು, ಪ್ರವಾದಿಗಳು ಮೊದಲಿನಿಂದಲೂ ಶಾಂತಿ ಮಂತ್ರವನ್ನೇ ಹೇಳಿಕೊಂಡು ಬಂದಿದ್ದಾರೆ. ಮನುಕುಲ ಒಂದಾಗಿರಬೇಕು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂತದ ದೇಶ ವಿಶ್ವದ ಇತರೆಡೆಯಲ್ಲಿ ಕಾಣಲು ಸಾಧ್ಯವಿಲ್ಲ. ಹಾಗಾಗಿ ಭಾರತದಲ್ಲಿ ಜನಿಸಿದ್ದಕ್ಕೆ ನಾವು ಅಭಿಮಾನ ಪಡಬೇಕು. ದೇವಾಲಯ, ಮಸೀದಿಗಳಲ್ಲಿ ನಡೆಯುವ ಪ್ರಾರ್ಥನೆಗಳು ಸ್ವಾರ್ಥದಿಂದ ಕೂಡಿರುವುದಿಲ್ಲ. ಇವೆಲ್ಲಾ ಸಂಪೂರ್ಣ ಮನುಕುಲದ ಒಳಿತಿಗಾಗಿ ನಡೆಯುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೊಸರಾಜು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ. ರಾಜೇಶ್, ಖಜಾಂಚಿ ಅರುಣ್ ಶೆಟ್ಟಿ, ಗೌರವ ಸಲಹೆಗಾರ ಜಿ. ಚಿದ್ವಿಲಾಸ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ., ಮಡಿಕೇರಿ ನಗರಸಭೆ ಪೌರಾಯುಕ್ತ ರಮೇಶ್ ಹೆಚ್.ಆರ್., ಕೊಡಗು ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ, ಹೆಚ್ಚುವರಿ ಎಸ್‌ಪಿ ಸುಂದರ್ ರಾಜ್ ಇದ್ದರು.