

ಬಂಕಾಪುರ: ಕಳೆದೆರಡು ವರ್ಷಗಳಿಂದ ಶಿಗ್ಗಾಂವಿ ತಾಲೂಕಿನಾದ್ಯಂತ ಮುಂಗಾರು ಮತ್ತು ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆ ತೀವ್ರವಾಗಿ ಬೆಳೆಯುತ್ತಿದ್ದು, ನಿಯಂತ್ರಣಕ್ಕೆ ಬಾರದಂತಾಗಿದೆ.
ಕೂಲಿ ಕಾರ್ವಿುಕರ ಕೊರತೆಯಿಂದಾಗಿ ರೈತರು ಹತ್ತಿ ಬೆಳೆಯಿಂದ ವಿಮುಖರಾಗಿ ಕಡಿಮೆ ಖರ್ಚಿನ ಮತ್ತು ಉತ್ತಮ ದರ ಹೊಂದಿರುವ ಮೆಕ್ಕೆಜೋಳದತ್ತ ಒಲವು ತೋರಿದ್ದರು. ಈಗ ಮೆಕ್ಕೆಜೋಳಕ್ಕೆ ಮುಳ್ಳುಸಜ್ಜೆ ಕಂಟಕವಾಗಿದೆ. ನೋಡಲು ಸಜ್ಜೆ, ಜೋಳದ ಬೆಳೆಯಂತೆ ಕಾಣುವ ಮುಳ್ಳುಸಜ್ಜೆ ಮೆಕ್ಕೆಜೋಳಕ್ಕಿಂತಲೂ ಹುಲಸಾಗಿ ಬೆಳೆಯುತ್ತದೆ.
ಬಂಕಾಪುರ ಹೋಬಳಿ ಭಾಗದ ಬಹುತೇಕ ಜಮೀನು ಆಕ್ರಮಿಸಿಕೊಂಡಿರುವ ಮುಳ್ಳುಸಜ್ಜೆ, ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಮಳೆ ಬಿಡುವು ನೀಡದ ಕಾರಣ ಎಡೆಕುಂಟೆ ಹೊಡೆಯಲು ಆಗಿಲ್ಲ. ಹೀಗಾಗಿ, ಈ ಬಾರಿ ಮುಳ್ಳುಸಜ್ಜೆ ಕಳೆ ನಿಯಂತ್ರಣಕ್ಕೆ ಬಾರದೆ ಕಂಗಾಲಾಗಿದ್ದಾರೆ.
ಮುಳ್ಳುಸಜ್ಜೆ ಸಸಿಯನ್ನು ಸಣ್ಣದಾಗಿರುವಾಗ ಕಿತ್ತು ಹೊರಗೆ ಎಸೆದರೆ ಮಾತ್ರ ನಿಯಂತ್ರಿಸಬಹುದು. ದೊಡ್ಡದಾದ ನಂತರ ಬುಡದಿಂದಲೇ ಮುಳ್ಳಿನಿಂದ ಕೂಡಿರುವ ಮುಳ್ಳುಸಜ್ಜೆ ಕೀಳಲು ಕೂಲಿ ಕಾರ್ವಿುಕರು ಹಿಂದೇಟು ಹಾಕುತ್ತಾರೆ. ಇದರ ನಿಯಂತ್ರಣಕ್ಕೆ ಸೂಕ್ತ ಕಳೆನಾಶಕ ಮತ್ತು ಕೂಲಿ ಕಾರ್ವಿುಕರು ಸಿಗದೇ ರೈತರು ಪರದಾಡುತ್ತಿದ್ದಾರೆ.
ಸರ್ಕಾರ ಪೂರೈಸಿದ ರಾಸಾಯನಿಕ ಗೊಬ್ಬರ ಯೂರಿಯಾ ಮತ್ತು ಡಿಎಪಿಯಲ್ಲಿ ಮುಳ್ಳುಸಜ್ಜೆ ಬೀಜ ಬೆರೆತು ಬಂದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕೃಷಿ ವಿಜ್ಞಾನಿಗಳೇ ಉತ್ತರ ನೀಡಬೇಕಾಗಿದೆ. ತಾಲೂಕಿನ ಬಹುತೇಕ ರೈತರು ಮೆಕ್ಕೆಜೋಳದ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ, ಕೃಷಿ ಅಧಿಕಾರಿಗಳು ಕಳೆ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಕಂಡು ಹಿಡಿದು ನೆರವಿಗೆ ಬರಬೇಕು ಎಂದು ಆಗ್ರಹವಾಗಿದೆ.
ಫಲ ನೀಡದ ಪ್ರಯೋಗ: ಕೆಲ ಅಂಗಡಿಕಾರರು ಮುಳ್ಳು ಸಜ್ಜೆಗೆ ಕಳೆನಾಶಕ ಸಿಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ರೈತರು ಆ ಅಂಗಡಿಗಳಿಂದ ಕಳೆನಾಶಕ ಖರೀದಿಸಿ ಸಿಂಪಡಿಸಿದ್ದಾರೆ. ಆದರೆ, ಪರಿಣಾಮ ಮಾತ್ರ ಶೂನ್ಯವಾಗಿದೆ. ಕೆಲ ಪ್ರತಿಷ್ಠಿತ ಔಷಧ ಕಂಪನಿಗಳು ಮುಳ್ಳುಸಜ್ಜೆ ನಿಯಂತ್ರಣ ಮಾಡುತ್ತೇವೆ ಎಂದು ರೈತರ ಹೊಲಗಳಲ್ಲಿ ಉಚಿತವಾಗಿ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಆದರೂ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಅವರೂ ಕೈಚೆಲ್ಲಿದ್ದಾರೆ.
ಗೋವಿನಜೋಳ ಬಿತ್ತಿರುವ ಜಮೀನು ಬಹುತೇಕ ಮುಳ್ಳುಸಜ್ಜೆಯಿಂದ ಕೂಡಿದೆ. ಈಗಾಗಲೇ ಎರಡು ಬಾರಿ ಕಳೆನಾಶಕ ಸಿಂಪಡಿಸಿದ್ದೇನೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಹಲವು ಬಾರಿ ಕಿತ್ತರೂ ಮತ್ತೆ ಮತ್ತೆ ಹುಟ್ಟುತ್ತಿದೆ. ಭೂಮಿಯ ಫಲವತ್ತತೆ ಹೀರಿಕೊಂಡು ಗೋವಿನಜೋಳದ ಇಳುವರಿ ಕುಂಠಿತಗೊಳಿಸಿದೆ. ಇದಕ್ಕೆ ಕೃಷಿ ಅಧಿಕಾರಿಗಳು ಶಾಶ್ವತ ಪರಿಹಾರ ತಿಳಿಸಬೇಕು. | ನಿಂಗಪ್ಪ ಮಾಚೀನಹಳ್ಳಿ, ರೈತ ಹುಲಿಕಟ್ಟಿ ಗ್ರಾಮ ಮುಳ್ಳು ಸಜ್ಜೆ ನಿಯಂತ್ರಣಕ್ಕೆ ಇದವರೆಗೂ ಯಾವುದೇ ಅಧಿಕೃತ ರಾಸಾಯನಿಕ ಇನ್ನೂ ಬಿಡುಗಡೆಯಾಗಿಲ್ಲ. ಬೆಳೆ ಬದಲಾವಣೆ ಒಂದೇ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಇರುವ ಸದ್ಯದ ಪರಿಹಾರವಾಗಿದೆ. ರೈತರು ಎಡೆಕುಂಟೆಯಿಂದ ಇಲ್ಲವೇ ಕಳೆ ತೆಗೆಯುವ ಮೂಲಕ ನಿಯಂತ್ರಣ ಮಾಡಬೇಕು. | ಕೊಟ್ರೇಶ ಜಗ್ಗಲಿ, ಕೃಷಿ ಅಧಿಕಾರಿ ಶಿಗ್ಗಾಂವಿ