51 ಜನರಲ್ಲಿ ಸೋಂಕು ದೃಢ ; ತುಮಕೂರು ತಾಲೂಕಿನಲ್ಲೇ 23 ಮಂದಿಗೆ ಪಾಸಿಟಿವ್

TMK corona
Published on

ತುಮಕೂರು: ಜಿಲ್ಲೆಯಲ್ಲಿ ಮತ್ತೆ ಕರೊನಾ ಅಟ್ಟಹಾಸ ತೋರಿದೆ. ಮತ್ತಿಬ್ಬರನ್ನು ಬಲಿ ಪಡೆದಿರುವ ಮಹಾಮಾರಿ ಬುಧವಾರ 51 ಜನರಲ್ಲಿ ಕಾಣಿಸಿಕೊಂಡಿದೆ.

ತುಮಕೂರು ತಾಲೂಕು ಒಂದರಲ್ಲೇ 23 ಮಂದಿಗೆ ಸೋಂಕು ದೃಢಪಟ್ಟಿದೆ. ಕೊರಟಗೆರೆ ತಾಲೂಕು ಹೊರತುಪಡಿಸಿ ಉಳಿದ ಎಲ್ಲ 9 ತಾಲೂಕುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕುಣಿಗಲ್ 7, ಪಾವಗಡ 5, ಶಿರಾ 4, ಚಿಕ್ಕನಾಯಕನಹಳ್ಳಿ 3, ಗುಬ್ಬಿ 3, ತಿಪಟೂರು 3, ಮಧುಗಿರಿ 2 ಹಾಗೂ ತುರುವೇಕೆರೆ ತಾಲೂಕಿನ ಓರ್ವರು ಸೇರಿ ಒಟ್ಟು 51 ಜನರಲ್ಲಿ ಸೋಂಕು ದೃಢಪಟ್ಟಿದೆ.

48 ಮಂದಿ ಗುಣಮುಖ: ಜಿಲ್ಲಾಸ್ಪತ್ರೆಯಿಂದ ಒಂದೇ ದಿನ 48 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 485 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಸ್ವಲ್ಪಮಟ್ಟಿಗೆ ಸಮಾಧಾನಕರ ಸಂಗತಿ. ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಮಹಿಳೆಯರಿಬ್ಬರ ಬಲಿ: ಕರೊನಾ ಮತ್ತಿಬ್ಬರು ಮಹಿಳೆಯರು ಬಲಿಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ತುಮಕೂರಿನ ಹೊರವಲಯದ ಯಲ್ಲಾಪುರದ 50 ವರ್ಷದ ಮಹಿಳೆ ತೀವ್ರ ಉಸಿರಾಟ ಸಮಸ್ಯೆ, ಜ್ವರ ಕಾಣಿಸಿಕೊಂಡಿದ್ದು ಜು.17 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮೃತಪಟ್ಟಿದ್ದು ಸೋಂಕು ಇರುವುದು ದೃಢಪಟ್ಟಿದೆ.

ತಿಪಟೂರಿನ ಗಾಂಧಿನಗರದ 51 ವರ್ಷದ ಮಹಿಳೆಗೂ ತೀವ್ರ ಉಸಿರಾಟ ಸಮಸ್ಯೆ, ಜ್ವರ ಕಾಣಿಸಿಕೊಂಡಿದ್ದು ಜು.19 ರಂದು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದು ಕೋವಿಡ್ ಮಾರ್ಗಸೂಚಿ ಅನ್ವಯ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

48 ಮಂದಿ ಗುಣಮುಖ: ಕರೊನಾತಂಕದ ನಡುವೆಯೂ 48 ಮಂದಿ ಗುಣಮುಖರಾಗಿರುವುದು ಸಮಾಧಾನಕರವೆನಿಸಿದೆ. ಬುಧವಾರ ಜಿಲ್ಲೆಯ 48 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತುಮಕೂರಿನ 29, ಶಿರಾ 7, ಕುಣಿಗಲ್ 4, ಮಧುಗಿರಿ 3, ಪಾವಗಡ 3, ಕೊರಟಗೆರೆ, ಚಿಕ್ಕನಾಯಕನಹಳ್ಳಿ ತಲಾ ಓರ್ವರು ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 485 ಮಂದಿ ಸೋಂಕು ಮುಕ್ತರಾಗಿದ್ದಾರೆ. ತುಮಕೂರಿನವರೇ 182 ಮಂದಿ ಇದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net