ವಿವಾಹ ನೋಂದಣಿಗೆ ಜನಸಂದಣಿ!

25 BGV manju 5-Web
Published on

ಬೆಳಗಾವಿ: ಕೋವಿಡ್-19 ಲಾಕ್‌ಡೌನ್ ಬಳಿಕ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿಗಳಿಗಿಂತ ಹೆಚ್ಚು ವಿವಾಹ ನೋಂದಣಿ ಸಂಖ್ಯೆ ಹೆಚ್ಚುತ್ತಿದೆ. ಕೇವಲ ಆರು ತಿಂಗಳಲ್ಲಿ 3,055ಕ್ಕೂ ಅಧಿಕ ವಿವಾಹಗಳ ನೋಂದಣಿಯಾಗಿದೆ.

ದೇಶದಲ್ಲಿ ಮಹಾಮಾರಿ ಕರೊನಾದಿಂದಾಗಿ ಚಿನ್ನಾಭರಣ, ಕಲ್ಯಾಣ ಮಂಟಪ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಹೀಗಾಗಿ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇದೀಗ ವಿವಾಹ, ಪ್ರೇಮ ವಿವಾಹ, ಅಂತರ್ಜಾತಿ ವಿವಾಹ ನೋಂದಣಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿವೆ. ಆಸ್ತಿಗಳ ನೋಂದಣಿಗೆ ಮೀಸಲಾಗಿದ್ದ ಸಬ್‌ರಿಜಿಸ್ಟ್ರಾರ್ ಕಚೇರಿ ಇದೀಗ ವಿವಾಹ ಕಾರ್ಯಕ್ಕಾಗಿ ಜನಸಂದಣಿಯಿಂದ ಕೂಡಿರುತ್ತಿದೆ.

ಲಾಕ್‌ಡೌನ್‌ಗಿಂತ ಪೂರ್ವದಲ್ಲಿ ವಿವಾಹ ಹಾಗೂ ಸಂಬಂಧ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ಸರ್ಕಾರಿ ಸೌಲಭ್ಯಕ್ಕಾಗಿ ಹಾಗೂ ವಿದೇಶದಲ್ಲಿ ನೆಲೆಸಿರುವ ಮಕ್ಕಳನ್ನು ನೋಡಲು ಹಾಗೂ ಪ್ರವಾಸಕ್ಕೆ ತೆರಳುವವರು ಪಾಸ್‌ಪೋರ್ಟ್‌ಗಾಗಿ ವಿವಾಹ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಮದುವೆಗೆ ಮುನ್ನ ಅರ್ಜಿ ಸಲ್ಲಿಸಿ ವಿವಾಹದ ಬಳಿಕ ನೋಂದಣಿ
ಮಾಡಿಸಿಕೊಳ್ಳುತ್ತಿದ್ದರು. ಆದರೆ, 2020ರ ಏಪ್ರಿಲ್‌ನಿಂದ ಇತ್ತೀಚೆಗೆ ವಿವಾಹ ಅಗುವವರು ತಮ್ಮ ಕುಟುಂಬ ಸದಸ್ಯರೊಂದಿಗೆ ನೇರವಾಗಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಬಂದು ವಿವಾಹ ನೋಂದಣಿ ಮಾಡಿಕೊಂಡು ಹೋಗುತ್ತಿದ್ದಾರೆ.

ಅಂತರ್ಜಾತಿ ಮದುವೆಯಾಗಿ ಮಕ್ಕಳು, ಮೊಮ್ಮಕ್ಕಳು ಕಂಡಿರುವವರೂ ಸಹ ವಿವಾಹ ನೋಂದಣಿಗಾಗಿ ಕಚೇರಿಗೆ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ, ಆಸ್ತಿ ಇನ್ನಿತರ ಕಾರಣಳಿಗಾಗಿ 45 ವರ್ಷ ಮೇಲ್ಪಟ್ಟವರು ಕೂಡ ತಮ್ಮ ವಿವಾಹ ಸಂಬಂಧ ಭದ್ರತೆಗಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪ್ರೇಮ ವಿವಾಹ, ಅಂತರ್ಜಾತಿ ವಿವಾಹ ಮಾಡಿಕೊಂಡು ಬಳಿಕ ವಿಚ್ಛೇದಿತರಾಗಿ ಎರಡನೇ ಮದುವೆಯಾಗುವವರು ನೋಂದಣಿ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಬ್‌ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಕಚೇರಿಯಲ್ಲೇ ಎರಡು ನಿಮಿಷದಲ್ಲಿ ಮೂರುಗಂಟು

ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಜಿಲ್ಲೆಯ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರೇಮ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಇದರಲ್ಲಿ ಬಹುತೇಕ ಜೋಡಿಗಳು ಪೋಷಕರ ವಿರೋಧದಿಂದಾಗಿ ನೋಂದಣಿ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಕಚೇರಿಯಲ್ಲೇ ಹಾರಹಾಕಿ, ತಾಳಿಕಟ್ಟಿ, ಅಲ್ಲಿರುವವರಿಗೆ ಸಿಹಿ ವಿತರಿಸಿ ಹೋಗುತ್ತಿದ್ದಾರೆ. ಇದರಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಂಡವರೂ ಇದ್ದಾರೆ. ಒಟ್ಟಿನಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿಯೇ ಎರಡೇ ನಿಮಿಷದಲ್ಲಿ ಮೂರುಗಂಟು ಹಾಕಿಕೊಂಡು ಮದುವೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳಾದ ಸುರೇಶ ಎಸ್. ನಾಯಕ್, ರಘುರಾಮ್ ಎನ್. ಪಾಟೀಲ ಎಂಬುವವರು ತಿಳಿಸಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಬಳಿಕ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಿತ್ಯ 50 ವಿವಾಹ ನೋಂದಣಿಯಾಗುತ್ತಿದೆ. ಇದರಲ್ಲಿ ಹಿಂದು ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. 10 ರಿಂದ 12 ವರ್ಷಗಳ ಹಿಂದೆ ಮದುವೆಯಾಗಿ ಮಕ್ಕಳು ಇರುವವರೂ ಸಹ ವಿವಾಹ ನೋಂದಣಿಗಾಗಿ ಕಚೇರಿಗೆ ಆಗಮಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿವಾಹ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ನಿಜ.| ವಿಷ್ಣುತೀರ್ಥ, ಉಪ ನೋಂದಣಿ ಅಧಿಕಾರಿ, ಬೆಳಗಾವಿ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net