

ಅಂಕೋಲಾ: ಸುಗ್ಗಿ ಹಬ್ಬ, ಹೋಳಿ ಇದು ಪಟ್ಟಣದಲ್ಲಿ ವಿವಿಧ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ.ಇಲ್ಲಿ ಬುಡಕಟ್ಟು ಜನಾಂಗವಾದ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ ಪ್ರತಿವರ್ಷ ನಡೆಯುತ್ತದೆ. ಅಪರೂಪಕ್ಕೆ ನಾಮಧಾರಿ, ಕೋಮಾರಪಂಥ ಸಮಾಜದವರಿಂದ ಸುಗ್ಗಿ ಪ್ರದರ್ಶನಗೊಳ್ಳುತ್ತದೆ.
ಹೋಳಿ ಹಬ್ಬಕ್ಕೆ ವಿವಿಧ ವೇಷಗಳನ್ನು ತೊಟ್ಟು ಮನೆ ಮನೆಗೆ ತೆರಳಿ ಕಾಣಿಕೆ ಸಂಗ್ರಹಿಸುತ್ತಾರೆ. ಆದರೆ, ಈ ಬಾರಿ ಒಂದು ತಂಡ ವಾದ್ಯದ ಸಮೇತ ಮದುವೆ ದಿಬ್ಬಣವೇ ಆಗಿ ರೂಪುಗೊಂಡಿದ್ದು, ಮನೆ ಮನೆಗೆ ತೆರಳಿ ಕಾಣಿಕೆ ಸಂಗ್ರಹಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ತಾಲೂಕಿನ ನದಿಭಾಗ ಗ್ರಾಮದ ಸುಮಾರು 10ಕ್ಕೂ ಅಧಿಕ ಯುವಕರು ವಾದ್ಯದೊಂದಿಗೆ ಗಂಡು, ಹೆಣ್ಣಿನ ಜೋಡಿ ಸಿದ್ಧಪಡಿಸಿಕೊಂಡು ಮದುವೆ ದಿಬ್ಬಣದಂತೆ ಮನೆ ಮನೆಗೆ ತೆರಳಿ ಕಾಣಿಕೆ ತೆಗೆದುಕೊಂಡು ಬಂದಿರುವುದು ಹೊಸ ಕಲ್ಪನೆ ನೀಡಿದಂತಾಗಿದೆ. ಅಲ್ಲಿ ವರನಿಗೆ ಛತ್ರಿ ಹಿಡಿಯುವುದರಿಂದ, ಪುರೋಹಿತರೇ ನಿಂತು ಮದುವೆ ಮಾಡಿಸುವ ಶಾಸ್ತ್ರದವರೆಗೆ ವಿವಿಧ ಕಾರ್ಯಗಳೂ ಇದ್ದುದು ವಿಶೇಷ. ಒಟ್ಟಿನಲ್ಲಿ ಅಂಕೋಲಾ ತಾಲೂಕು ಸುಗ್ಗಿ ಹಬ್ಬಕ್ಕೆ ವಿಶೇಷ ಕೊಡುಗೆ ನೀಡುತ್ತದೆ.