

ಚಿಕ್ಕಬಳ್ಳಾಪುರ: ನಗರದ ಕ್ರೆಸ್ತ್ ಚರ್ಚಿನಲ್ಲಿ ಮದುವೆಯ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಗಲಾಟೆ ನಡೆದಿದ್ದು ಜನಸಂದಣಿಯ ನಡುವೆ ಗೊಂದಲ ಸೃಷ್ಟಿಯಾಗಿತ್ತು. ಇಲ್ಲಿನ ಚರ್ಚಿನಲ್ಲಿ ಬುಧವಾರ ಬೆಳಿಗ್ಗೆ ಮೋಹನ್ ಕಾಂತ್ ಯುವತಿಯೊಂದಿಗೆ ವಿವಾಹವಾಗುತ್ತಿರುವುದರ ಬಗ್ಗೆ ಮಾಹಿತಿ ತಿಳಿದುಕೊಂಡು ಬಂದ ಆತನ ಮೊದಲ ಪತ್ನಿಯ ಕುಟುಂಬಸ್ಥರು ಬಂದು ಗಲಾಟೆ ಮಾಡಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದರ ನಡುವೆ ಸ್ಥಳಿಯರು ಮತ್ತು ಪೊಲೀಸರು ಮಧ್ಯೆ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
*ಪ್ರಕರಣದ ಹಿನ್ನೆಲೆ
ಈಗಾಗಲೇ ವರ ಮೋಹನ್ ಕಾಂತ್ ಮದುವೆಯಾಗಿದ್ದು ಪ್ರತಿನಿತ್ಯ ಮನೆಯಲ್ಲಿನ ಗಲಾಟೆ ಹಿನ್ನೆಲೆಯಲ್ಲಿ ಪತಿ ಪತ್ನಿ ಬೇರೆಯಾಗಿದ್ದರು. ಇಬ್ಬರ ನಡುವಿನ ವಿವಾದವು ನ್ಯಾಯಾಲಯದಲ್ಲಿ ವಿಚ್ಚೇದನ ಪಡೆಯುವ ಹಂತಕ್ಕೆ ಹೋಗಿದೆ. ಹೀಗಿರುವಾಗ ಇಲ್ಲಿನ ಕ್ರೆಸ್ತ್ ಚರ್ಚಿನಲ್ಲಿ ಮೋಹನ್ ಎರಡನೇ ಮದುವೆಯಾಗುತ್ತಿದ್ದ. ಇದರ ಬಗ್ಗೆ ಮಾಹಿತಿ ತಿಳಿದುಕೊಂಡ ಬಂದ ಮೊದಲನೇ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
ಈಗಾಗಲೇ ನ್ಯಾಯಾಲಯದ ಮೂಲಕ ವಿಚ್ಚೇದನ ಪಡೆಯಲಾಗಿದೆ. ಇದರಿಂದ ಮದುವೆಯಾಗಲು ಮುಂದಾಗಿರುವುದಾಗಿ ಮೋಹನ್ ಕಾಂತ್ ತಿಳಿಸಿದರೆ, ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ದಾವೆ ಹೂಡಿದ್ದು ಇದು ಇತ್ಯರ್ಥವಾಗುವ ಮೊದಲೇ ಬೇರೆ ಯುವತಿಯನ್ನು ಪತಿ ಮದುವೆಯಾಗುತ್ತಿದ್ದು ನ್ಯಾಯ ಕೊಡಿಸಬೇಕು ಎಂದು ಸಂತ್ರಸ್ಥ ಮಹಿಳೆ ಅಳಲು ತೋಡಿಕೊಂಡಿದ್ದಾಳೆ.