Web Exclusive: ಯೂಟ್ಯೂಬ್ ಪಾಠಕ್ಕೆ ಮಂಡ್ಯ ಡಯಟ್ ರೆಡಿ

Teacher
Published on
  • ಕೆ.ಎನ್.ರಾಘವೇಂದ್ರ, ಮಂಡ್ಯ

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಮಕ್ಕಳ ಕಲಿಕೆಗೆ ಅನುಕೂಲ ಮಾಡಲು ಮಂಡ್ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಕಳೆದ ವರ್ಷ ಚಾಲನೆ ನೀಡಿದ್ದ ಯೂಟ್ಯೂಬ್​ನಲ್ಲಿಯೇ ಪಾಠ ಬೋಧನೆ ಹೊಸತನದೊಂದಿಗೆ ಶೀಘ್ರ ಪುನಾರಂಭವಾಗಲಿದೆ.

8ರಿಂದ 10ನೇ ತರಗತಿವರೆಗೆ ಸರ್ಕಾರದಿಂದ ದೂರದರ್ಶನದ ಮೂಲಕ ಪಾಠ ಕಲಿಸಲಾಗುತ್ತಿ್ತ್ತು. ಈ ಹಿನ್ನೆಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಯೂಟ್ಯೂಬ್ ಬಳಿಸಿಕೊಂಡು ವಿಭಿನ್ನ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿತ್ತು. ಇದೀಗ ಮತ್ತೆ ಯೂಟ್ಯೂಬ್​ನಲ್ಲಿ ಪಾಠ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

4.5 ಲಕ್ಷ ರೂ. ವೆಚ್ಚದಲ್ಲಿ ಸ್ಟುಡಿಯೋ: ಕಳೆದ ಬಾರಿ ತರಗತಿಯಲ್ಲಿ ಸ್ಕ್ರೀನ್ ಅಳವಡಿಸಿ ಕ್ಯಾಮರಾ ಮತ್ತು ಲೈಟ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಹೈಟೆಕ್ ಸ್ಟುಡಿಯೋ ಮಾಡಲಾಗಿದೆ. ಇದಕ್ಕಾಗಿ 4.5 ಲಕ್ಷ ರೂ. ವ್ಯಯಿಸಲಾಗಿದೆ. ಡಯಟ್​ನಲ್ಲಿ ಆಯೋಜಿಸುವ ತರಬೇತಿಗೆ ಸರ್ಕಾರದಿಂದ ಇಂತಿಷ್ಟು ಎಂದು ಬಿಡುಗಡೆಯಾಗುವ ಹಣವನ್ನು ಉಳಿಸಿಕೊಂಡು, ಇಲಾಖೆಯ ಮೇಲಧಿಕಾರಿಗಳ ಅನುಮತಿ ಪಡೆದುಕೊಂಡು ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ನೋಡಲು ಆಕರ್ಷಕವಾಗಿದ್ದು, ಬೋಧನೆ ಮಾಡುವ ಶಿಕ್ಷಕರಿಗೂ ಹಾಗೂ ವಿಡಿಯೋದಲ್ಲಿ ನೋಡುವ ಮಕ್ಕಳಿಗೆ ಇಷ್ಟವಾಗುವಂತಿದೆ. ಇನ್ನು ಡಿಎಸ್​ಇಆರ್​ಟಿಯಿಂದ ಕೆಲವೆಡೆ ನಿರ್ಮಾಣ ಮಾಡಿರುವುದನ್ನು ಹೊರತುಪಡಿಸಿ ಈ ರೀತಿಯ ಹೈಟೆಕ್ ಸ್ಟುಡಿಯೋ ಹೊಂದಿರುವ ರಾಜ್ಯದ ಮೊದಲ ಡಯಟ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ನುರಿತ ಶಿಕ್ಷಕರಿಂದ ಬೋಧನೆ: ಕಳೆದ ಸಾಲಿನಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಆಯ್ಕೆ ಮಾಡಿಕೊಂಡ 23 ಜನ ಶಿಕ್ಷಕರಿಗೆ ತರಬೇತಿ ನೀಡಲಾಗಿತ್ತು. ಇವರಿಗೆ 7ನೇ ತರಗತಿವರೆಗೆ ಪಾಠ ಮಾಡಲು ಅವಕಾಶವಿತ್ತು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಸ್ವಯಂಪ್ರೇರಿತರಾಗಿ ಬರುವ ಶಿಕ್ಷಕರಿಗೆ ಅವಕಾಶದ ಜತೆಗೆ 1ರಿಂದ 10ನೇ ತರಗತಿವರೆಗೆ ಪಾಠ ಮಾಡಲು ಅನುಮತಿ ನೀಡಲಾಗುತ್ತಿದೆ.

ಕಳೆದ ಬಾರಿ ಡಯಟ್​ನ ನಿರ್ವಹಣೆ ಹಾಗೂ ಶಿಕ್ಷಕರ ಪಠ್ಯ ಬೋಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಾರಿಯೂ ಉತ್ತಮ ಸ್ಪಂದನೆ ಸಿಗುವ ಭರವಸೆ ಹೆಚ್ಚಿದೆ. ಮೊದಲ ಹಂತದಲ್ಲಿ ಪ್ರೋಮೋಗಳನ್ನು ಸಿದ್ಧಪಡಿಸಿ ಎಲ್ಲರಿಗೂ ಪರಿಚಯಿಸಲಾಗುತ್ತದೆ. ಬಳಿಕ ಶಿಕ್ಷಕರು ಬೋಧನೆ ಆರಂಭಿಸಲಿದ್ದಾರೆ. ಪಾಠವನ್ನು ಮೊದಲು ಡಯಟ್​ನಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ವಿಷಯಗಳು ಸರಿಯಾಗಿರುವುದರ ಬಗ್ಗೆ ಖಚಿತಪಡಿಸಿಕೊಂಡು ನಂತರ ಅಪ್​ಲೋಡ್ ಮಾಡಲಾಗುತ್ತದೆ. ಇನ್ನು ವಿಡಿಯೋ ಮಾಡುವುದರಿಂದ ಹಿಡಿದು ಮಿಕ್ಸಿಂಗ್ ಇತ್ಯಾದಿಗಳನ್ನು ಶಿಕ್ಷಕರೇ ಮಾಡುತ್ತಿದ್ದಾರೆ. ಇವರಿಗೆ ಅಜೀಂ ಪ್ರೇಮ್ೕ ಸಂಸ್ಥೆ ಸಾಥ್ ನೀಡುತ್ತಿದೆ.

ಒಟ್ಟಾರೆ ಕರೊನಾದಿಂದಾಗಿ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯುಂಟಾಗಿರುವ ಸಂದರ್ಭದಲ್ಲಿ ಡಯಟ್​ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈಗಾಗಲೇ ಮಂಡ್ಯ ಡಯಟ್​ನ ಕಾರ್ಯಕ್ಕೆ ಇಲಾಖೆಯ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಕ್ಕಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಂಡರೆ ಎಲ್ಲರ ಶ್ರಮ ಸಾರ್ಥಕ ಎನ್ನಿಸಿಕೊಳ್ಳಲಿದೆ.

ಮೂರು ಸಾವಿರ ನೋಂದಣಿ

‘ಸವಿ ಮಂಡ್ಯ’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್​ನಲ್ಲಿ ಪಾಠ ಅಪ್​ಲೋಡ್ ಆಗಲಿದೆ. ಹಿಂದೆ ಚಾನಲ್​ಗೆ 959 ಜನರು ನೋಂದಣಿಯಾಗಿದ್ದರು. ಇದೀಗ 3,100 ಜನರು ನೋಂದಣಿ ಮಾಡಿಕೊಂಡಿದ್ದಾರೆ. ವಿಡಿಯೋಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದೆ. ಅಪ್​ಲೋಡ್ ಮಾಡಿದ ಬಳಿಕ ಅದರ ಲಿಂಕ್​ಅನ್ನು ಬಿಇಒ, ಬಿಆರ್​ಸಿ, ಬಿಆರ್​ಪಿ, ಮುಖ್ಯಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ.

ಕೋಟ್

ಕಳೆದ ಬಾರಿಗಿಂತ ಈ ಸಲ ಸ್ವಲ್ಪ ವಿಭಿನ್ನವಾಗಿರಲಿದೆ. ಬೋಧನೆಗೆ ಅನುಕೂಲವಾಗಲೆಂದು ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ಪಾಠ ಮಾಡಲು ಶಿಕ್ಷಕರು ಸಿದ್ಧವಾಗಿದ್ದಾರೆ. ಮುಂದಿನ ವಾರದಿಂದ ಚಾಲನೆ ಸಿಗಲಿದೆ. ವಿದ್ಯಾರ್ಥಿಗಳು ಈ ವಿಡಿಯೋಗಳನ್ನು ನೋಡಿ ಕಲಿಕಾಭ್ಯಾಸ ಮಾಡಿಕೊಳ್ಳಬಹುದು.

| ಶಿವಮಾದಪ್ಪ ಡಯಟ್ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net