

| ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಋಷಿಕೇಶ ಭಗವಾನ್ ಸೋನಾವಣೆ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಯಾಗಿ ತಿಂಗಳು ಸಮೀಪಿಸುತ್ತಿದ್ದರೂ ಇದುವರೆಗೂ ಸರ್ಕಾರ ಹೊಸ ಎಸ್ಪಿ ನೇಮಕ ಮಾಡದಿರುವುದು ಅಚ್ಚರಿ ತಂದಿದೆ. ಯಡಾ ಮಾರ್ಟಿನ್ ಮಾರ್ಬನ್ಯಾಂಗ್ 2018ರಲ್ಲಿ ವರ್ಗವಾಗಿ ಕಲಬುರಗಿ ಪಿಟಿಸಿಗೆ ತೆರಳಿದ ನಂತರ ಸೋನಾವಣೆ ಮೂರು ವರ್ಷ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಏ.1ರಂದು ಅವರನ್ನು ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗ ಮಾಡಿದೆ. ಆದರೆ ಇದುವರೆಗೆ ನೂತನ ಎಸ್ಪಿ ಬಾರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಲ್ಲದೆ ರಾಜ್ಯ ಸರ್ಕಾರಕ್ಕೆ ಕರ್ನಾಟಕದಲ್ಲಿ ಯಾದಗಿರಿ ಇರುವ ಬಗ್ಗೆ ಗಮನಕ್ಕಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಇಲಾಖೆಗೆ ಸಂಬಂಧಿಸಿದಂತೆ ಏನೇ ಮಹತ್ವದ ನಿರ್ಣಯ ಕೈಗೊಳ್ಳುವ ಅಧಿಕಾರ ಇರೋದು ಕೇವಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ. ಜಿಲ್ಲೆಯ ಭದ್ರತೆ, ಇಲಾಖೆ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುವ ಜಿಮ್ಮೇದಾರಿ ಅವರ ಮೇಲಿರುತ್ತದೆ. ಆದರೆ ಜಿಲ್ಲೆಯಲ್ಲಿ ಎಸ್ಪಿ ಹುದ್ದೆ ಖಾಲಿ ಇರುವ ಕಾರಣ ಖಾಕಿಪಡೆಗೆ ಅನಾಥಪ್ರಜ್ಞೆ ಕಾಡುವಂತಾಗಿದೆ. ಸದ್ಯ ಪಕ್ಕದ ಕಲಬರುಗಿಯಿಂದ ಪ್ರಸನ್ನ ದೇಸಾಯಿ ಅವರಿಗೆ ಸರ್ಕಾರ ಪ್ರಭಾರ ಎಸ್ಪಿ ಹೊಣೆ ನೀಡಿದ್ದು, ಪ್ರಮುಖ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಿಂದಾಸ್ ನಡೆದಿದ್ದು, ಬ್ರೇಕ್ ಹಾಕುವಂತೆ ಸಾರ್ವಜನಿಕರು ಯಾರ ಬಳಿ ಮನವಿ ಮಾಡಿಕೊಳ್ಳಬೇಕು ಎಂಬುದು ತಿಳಿಯದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಜೂಜಾಟ, ಮಟಕಾ ಸೇರಿದಂತೆ ಅಕ್ರಮ ಚಟುವಟಿಕೆ ಗರಿಗೆದರಿವೆ. ಇದರಿಂದ ಬಡ ಸಂಸಾರಗಳು ಪರೇಶಾನ್ನಲ್ಲಿವೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ. ಯುವ ಜನತೆಯಂತೂ ಮಟಕಾ ಗೀಳಿಗೆ ಬಿದ್ದು ಮನಬಂದಂತೆ ಹಣ ಕಳೆದುಕೊಳ್ಳುತ್ತಿದ್ದಾರೆ. ಬೆಳಗಾದರೆ ಸಾಕು ಬುಕ್ಕಿಗಳು ಬಹಿರಂಗವಾಗಿಯೇ ಹಳ್ಳಿಗಳಲ್ಲಿ ಮಟಕಾ ಸಂಖ್ಯೆ ಬರೆದುಕೊಳ್ಳುತ್ತಿದ್ದಾರೆ. ಇದು ಸಭ್ಯ ಜನರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರ ಮಾತ್ರ ಜಿಲ್ಲೆಗೆ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡದಿರುವುದು ವರ್ತಮಾನದ ದುರಂತ.
ಕರೊನಾ 2ನೇ ಅಲೆ ದಿನೇದಿನೆ ಹೆಚ್ಚಾಗುತ್ತಲೇ ಸಾಗುತ್ತಿದ್ದು, ಸರ್ಕಾರ ನೈಟ್ ಆಂಡ್ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಭದ್ರತೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಇನ್ನು ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಣಗೊಂಡಿದ್ದು, ಕ್ಷಣಕ್ಷಣಕ್ಕೂ ಅಳೆದು ತೂಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇವೆಲ್ಲವೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿದೆ. ಯಾವುದೇ ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗ ಮಾಡಿದ ಎರಡ್ಮೂರು ದಿನಗಳಲ್ಲಿ ಆ ಜಾಗಕ್ಕೆ ಹೊಸಬರನ್ನು ನೇಮಕ ಮಾಡುತ್ತದೆ. ಆದರೆ ಯಾದಗಿರಿ ಜಿಲ್ಲೆ ಈ ವ್ಯವಸ್ಥೆಗೆ ಹೊರತುಪಡಿಸಿ ಇದೆಯೇ ಎಂಬ ಯಕ್ಷಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜಿಲ್ಲೆಯಲ್ಲಿ ಇಬ್ಬರು ಪಕ್ಷದ ಶಾಸಕರಿದ್ದಾರೆ. ಆದರೆ ಇವರಿಗೆ ಜಿಲ್ಲೆಯ ರಕ್ಷಣಾಧಿಕಾರಿ ವರ್ಗಾವಣೆಯಾಗಿ ಒಂದು ತಿಂಗಳು ಕಳೆದ ಬಗ್ಗೆ ಗೊತ್ತಿಲ್ಲವೇ ಅಥವಾ ಗೊತ್ತಿದ್ದರೂ ಜಾಣಮೌನ ವಹಿಸಿದ್ದಾರೆಯೇ ಎಂದು ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಮುಂದುವರಿದ ಜಿಲ್ಲೆಗಳಲ್ಲಿನ ಆಡಳಿತ ಪಕ್ಷದ ಶಾಸಕರು ತಮ್ಮ ಕ್ಷೇತ್ರಕ್ಕೆ ಒಂದು ಸಣ್ಣ ಕೆಲಸವಾಗಬೇಕಾದರೂ ಮುಖ್ಯಮಂತ್ರಿ ಬಳಿ ಪಟ್ಟು ಹಿಡಿದು ಮಾಡಿಸಿಕೊಳ್ಳುತ್ತಾರೆ. ಆದರೆ ನಮ್ಮ ಶಾಸಕರಿಗೆ ಕನಿಷ್ಠ ಹೊಸ ಎಸ್ಪಿ ನೇಮಕ ಮಾಡಿಸುವಷ್ಟೂ ತಾಕತ್ತು ಇಲ್ಲವೆ ಎಂದು ಪ್ರತಿಪಕ್ಷಗಳು ಲೇವಡಿ ಮಾಡುತ್ತಿವೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಯಾದ ಮೇಲೆ ಹೊಸ ಎಸ್ಪಿ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ನೂತನ ಎಸ್ಪಿ ಅಧಿಕಾರ ಸ್ವೀಕರಿಸಲಿದ್ದಾರೆ.
| ಮನೀಷ್ ಖರ್ಬಿಕರ್ ಐಜಿಪಿ, ಈಶಾನ್ಯ ವಲಯ ಕಲಬುರಗಿ