

ಹಾಸನ: ತಾಲೂಕಿನ ಐತಿಹಾಸಿಕ ಶೆಟ್ಟಿಹಳ್ಳಿ ರೋಸರಿ ಚರ್ಚ್ ಮರು ನಿರ್ಮಾಣಕ್ಕೆ ಪುರಾತತ್ವ ಇಲಾಖೆ ಮುಂದಾಗಿದ್ದು, 1.20 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ಚಾರಿತ್ರಿಕ ಐತಿಹ್ಯವನ್ನು ಒಡಲೊಳಗೆ ಹುದುಗಿಸಿಕೊಂಡಿರುವ ರೋಸರಿ (ಜಪಮಾಲೆ ರಾಣಿ) ಚರ್ಚ್ ಸಂರಕ್ಷಣೆಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬಂದಿತ್ತು. ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ. ರವಿ 2020ರ ಜುಲೈ 3ರಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರ ಜತೆ ಚರ್ಚ್ಗೆ ಭೇಟಿ ನೀಡಿ, ಯಥಾಸ್ಥಿತಿಯಲ್ಲಿ ಚರ್ಚ್ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆ ಪ್ರಯತ್ನದ ಫಲವಾಗಿ ಚರ್ಚ್ ಮರು ನಿರ್ಮಾಣಕ್ಕೆ ಕಾಲ ಕೂಡಿಬಂದಿದ್ದು ಅನುದಾನಕ್ಕಾಗಿ ಪ್ರಸ್ತಾವನೆ ತಯಾರಾಗಿದೆ.
1860ರಲ್ಲಿ ನಿರ್ಮಾಣವಾಗಿರುವ ರೋಸರಿ ಚರ್ಚ್ಗೆ 360 ವರ್ಷಗಳ ಇತಿಹಾಸವಿದೆ. ಶೆಟ್ಟಿಹಳ್ಳಿ ಸುತ್ತಲೂ ಅಂದಾಜು ಎರಡು ಸಾವಿರ ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಹೇಮಾವತಿ ಜಲಾಶಯ ನಿರ್ಮಾಣದ (1976) ಬಳಿಕ ಗ್ರಾಮ ಸಂಪೂರ್ಣ ಮುಳುಗಡೆಯಾಯಿತು. ಹೀಗಾಗಿ ಚರ್ಚ್ ಒಂದೇ ಉಳಿದುಕೊಂಡಿದ್ದು ಚರಿತ್ರೆಯನ್ನು ನೆನಪಿಸುವಂತಿದೆ. ರೆವರೆಂಡ್ ಎಫ್. ಕಿಟಲ್ ಶೆಟ್ಟಿಹಳ್ಳಿ ಚರ್ಚ್ನಲ್ಲಿದ್ದರು. ಕಳೆದ 40 ವರ್ಷಗಳಿಂದ ಪ್ರತಿವರ್ಷ ಮಳೆಗಾಲದ ಎರಡು ತಿಂಗಳು ಹಿನ್ನೀರು ಹೆಚ್ಚಾಗುವ ಕಾರಣ ಈ ಚರ್ಚ್ ನೀರಲ್ಲೇ ತೇಲುವ ಹಾಗೆ ಕಾಣಿಸುತ್ತದೆ. ‘ಮುಳುಗದ ಟೈಟಾನಿಕ್’ ಎಂಬ ಹೆಸರಿನಿಂದಲೂ ಇದು ಖ್ಯಾತಿ ಗಳಿಸಿದೆ. ಸಾಕಷ್ಟು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಚರ್ಚ್ನಲ್ಲಿ ಆಗಬೇಕಿರುವ ಕೆಲಸಗಳ ಪಟ್ಟಿಯನ್ನು ಪುರಾತತ್ವ ಇಲಾಖೆ ಸಿದ್ಧಪಡಿಸಿದೆ.
2,573 ಚದರ ಅಡಿ ವಿಸ್ತೀರ್ಣದಲ್ಲಿರುವ ಚರ್ಚ್ ಸುತ್ತಲಿನ ಪ್ರದೇಶವನ್ನು ಸಮತಟ್ಟು ಮಾಡುವುದು, ಚರ್ಚ್ನ ತಳಪಾಯ ಗಟ್ಟಿಗೊಳಿಸುವುದು, ಗೋಡೆಗಳಲ್ಲಿನ ಸಂದುಗಳಿಗೆ ಸುಣ್ಣದ ಗ್ರೌಟಿಂಗ್, ಬಿರುಕು ಬಿಟ್ಟಿರುವ ಗೋಡೆಗಳಿಗೆ ಕಲ್ಲುಗಳಿಂದ ಸ್ಟಿಚಿಂಗ್ ಮಾಡುವುದು ಸದ್ಯದ ಕಾಮಗಾರಿಯಾಗಿದೆ. ಹಿಂಭಾಗದ ಗೋಪುರದ ಹವಾನಿಯಂತ್ರಣ ಪದರ ಹಾಗೂ ಮದ್ರಾಸ್ ತಾರಸಿ ತೆಗೆಯಲು ನಿರ್ಧರಿಸಲಾಗಿದೆ. ಚರ್ಚ್ನ ಗೋಡೆ, ಮಿನಾರ್, ಆರ್ಚ್ ಸಂರಕ್ಷಿಸಲು ಗೋಡೆಗೆ ಸುಣ್ಣದ ಗಾರೆಯಿಂದ ಮಡ್ಡಿ ಮಾಡಿ ನಂತರ ಹಿಂದಿನ ಶೈಲಿಯಲ್ಲಿಯೇ ಮಿನಾರ್ ಹಾಗೂ ಆರ್ಚ್ಗಳನ್ನು ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ತಳಪಾಯ ಹಾಳಾಗದಂತೆ ಸುತ್ತಲೂ 5 ಮೀ. ಎತ್ತರದಲ್ಲಿ ತಡೆಗೋಡೆ ನಿರ್ವಿುಸಿ, ಒಳಭಾಗದ ಸುತ್ತಲೂ ಗ್ರಾವೆಲ್ ಹಾಕಿ ಸಮತಟ್ಟು ಮಾಡಿ ಗಟ್ಟಿಗೊಳಿಸಲಾಗುವುದು. ಹಿಂಭಾಗದ ಗೋಪುರಕ್ಕೆ ಹೊಸದಾಗಿ ಮದ್ರಾಸ್ ತಾರಸಿ ಹಾಕಿ ಮಿನಾರ್ ನಿರ್ವಿುಸಲಾಗುವುದು.
ಪ್ರವಾಸೋದ್ಯಮ ಸಚಿವರಾಗದ್ದ ಸಿ.ಟಿ. ರವಿ ಹಾಗೂ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಲಾಗಿದೆ. ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದ ತಂಡವೇ ಇಲ್ಲಿಯೂ ಕಾರ್ಯ ನಿರ್ವಹಿಸಲಿದೆ.| ಸತೀಶ್ ಪುರಾತತ್ವ ಇಲಾಖೆ ಸಂರಕ್ಷಣಾ ಸಹಾಯಕ, ಮೈಸೂರು ವಲಯ