Web Exclusive | ಪ್ರತಿಧ್ವನಿಸಿದ ಬಂಡೀಪುರ ರಾತ್ರಿ ಸಂಚಾರ ನಿಷೇಧ; ತಮಿಳುನಾಡು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಕೆ..

Web Ex
ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಊಟಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಅಭ್ಯರ್ಥಿ ಭೋಜರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಇದ್ದರು.
Published on

 | ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ

ನೆರೆಯ ಕೇರಳದಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಯ ವೇಳೆ ಕೇಳಿಬಂದಿದ್ದ ‘ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಒತ್ತಾಯ’ ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲೂ ಪ್ರತಿಧ್ವನಿಸಿದೆ.

ತಮಿಳುನಾಡಿನ ಊಟಿಯಲ್ಲಿ ಬಿಜೆಪಿ ಪರ ಮತಯಾಚನೆ ಮಾಡಲು ತೆರಳಿದ್ದ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ, ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರನ್ನು ಅಲ್ಲಿನ ಲಾರಿ, ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘ, ಸಾರ್ವಜನಿಕರು ಭೇಟಿ ಮಾಡಿ ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ಹೇರಿದ್ದರಿಂದ ಊಟಿ ಭಾಗದ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಆದ್ದರಿಂದ ನಿರ್ಬಂಧ ಸಡಿಲಗೊಳಿಸಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕರ್ನಾಟಕದ ಚೆಕ್​ಪೋಸ್ಟ್​ಗಳಲ್ಲಿ ತಮಿಳುನಾಡು ನೋಂದಣಿ ಲಾರಿಗಳು ಹಾಗೂ ವಾಹನಗಳ ಚಾಲಕರನ್ನು ಶೋಷಿಸಲಾಗುತ್ತಿದೆ, ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಭಾನುವಾರ ಊಟಿಯ ಜೆಮ್ ಪಾರ್ಕ್ ಹೋಟೆಲ್​ನಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿ, ವನ್ಯಜೀವಿಗಳ ಹಿತದೃಷ್ಟಿಯಿಂದ 10 ವರ್ಷಗಳಿಂದ ರಾತ್ರಿ ಸಂಚಾರಕ್ಕೆ ನಿರ್ಬಂಧಿಸಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲದೆ, ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳ ಮೂಲಕ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಮೈಸೂರಿಗೂ ಲಾಭವಾಗಲಿದೆ ಎಂದಿದ್ದಾರೆ.

ಭರವಸೆ ನೀಡಿದ್ದ ರಾಹುಲ್: ಕಳೆದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವೈನಾಡಿನಿಂದ ಸ್ಪರ್ಧಿಸಿದ್ದಾಗಲೂ ರಾತ್ರಿ ಸಂಚಾರ ನಿರ್ಬಂಧ ಪ್ರಮುಖ ವಿಷಯವಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರ್ಬಂಧ ತೆರವುಗೊಳಿಸಲು ಪ್ರಯತ್ನಿಸುವುದಾಗಿ ರಾಹುಲ್ ಭರವಸೆ ನೀಡಿದ್ದರು. ಈಗ ತಮಿಳುನಾಡು ಚುನಾವಣೆಯಲ್ಲೂ ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ದನಿ ಎತ್ತಲಾಗಿದೆ. ಈ ಮೂಲಕ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ವಿಷಯ ಚುನಾವಣೆಯ ಅಸ್ತ್ರವಾಗಿಬಿಟ್ಟಿದೆ.

‘ಸುಪ್ರೀಂ’ ವಿಚಾರಣೆ: 2010ರಲ್ಲಿ ಚಾಮರಾಜನಗರದ ಅಂದಿನ ಜಿಲ್ಲಾಧಿಕಾರಿ ಮನೋಜ್​ಕುಮಾರ್ ಮೀನಾ, ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಕೇರಳ ಹಾಗೂ ತಮಿಳುನಾಡಿಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್ ಮೊರೆ ಹೋದರೂ ನ್ಯಾಯಾಲಯ ಜಿಲ್ಲಾಧಿಕಾರಿಯ ಆದೇಶ ಎತ್ತಿಹಿಡಿಯಿತು. ನಂತರ ಸುಪ್ರೀಂಕೋರ್ಟ್​ಗೆ ಮೊರೆಹೋಗಿದ್ದು ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

ಸಂಚಾರ ನಿಷೇಧ ಆದೇಶ ಕೇಂದ್ರ ಸರ್ಕಾರದ ತೀರ್ವನವಾಗಿದೆ. ಅಲ್ಲದೆ, ಈ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಬಾಕಿ ಇದೆ. ಏನೇ ಮಾಡಬೇಕಾದರೂ ಕರ್ನಾಟಕ-ತಮಿಳುನಾಡು ರಾಜ್ಯ ಸರ್ಕಾರಗಳು ಮಾತನಾಡಿಕೊಂಡು ಅದನ್ನು ಕೇಂದ್ರಕ್ಕೆ ಶಿಫಾರಸು ಮಾಡಿ, ಅಲ್ಲಿಂದ ಪ್ರಯತ್ನ ಮಾಡಬೇಕು ಎಂದು ತಮಿಳುನಾಡಿನ ಜನತೆಗೆ ತಿಳಿಸಲಾಗಿದೆ.

| ನಿರಂಜನ್ ​ಕುಮಾರ್ ಗುಂಡ್ಲುಪೇಟೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net