Web Exclusive| ವಾಹನ ನಿನ್ನದೆ, ದಾರಿಯೂ ನಿನ್ನದೆ, ಉಳಿಯಲಿ ಭಕ್ತರ ಪ್ರಾಣ; ನೆಲದ ಮೇಲೆ ಹಾರುವ ಜೀಪುಗಳು, ಸ್ವಲ್ಪ ಎಚ್ಚರ ತಪ್ಪಿದರೂ ಕುತ್ತು..

Web Ex F
Published on

| ಮುಳ್ಳೂರು ರಾಜು ಮೈಸೂರು

ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಯ ಯಾತ್ರೆಗೆಂದು ನೀವು ಕಾಲ್ನಡಿಗೆಯಲ್ಲಿ ತೆರಳಿದರೆ, ಮಾರ್ಗ ಮಧ್ಯೆ ‘ಹೆಲಿಕಾಪ್ಟರ್’ ಏನಾದರೂ ನಿಮ್ಮ ಸನಿಹವೇ ಬಂದುಬಿಟ್ಟಿತೇನೋ ಎಂಬಂತಹ ಶಬ್ದ ಆಗಾಗ್ಗೆ ಕೇಳಿಬರುತ್ತದೆ. ಆಗ ನೀವು ಗಾಬರಿಯಿಂದ ಅತ್ತ ತಿರುಗಿ ನೋಡುತ್ತೀರಿ. ಅಷ್ಟರೊಳಗೆ ಆ ಶಬ್ದ ಕೇಳಿಬಂದ ಕಡೆಯಿಂದ ‘ಉದ್ದನೆಯ ಜೀಪು’ ದಢಬಢ... ದಢಬಢ... ಸದ್ದಿನೊಂದಿಗೆ ನಿಮ್ಮತ್ತ ಆಗಮಿಸಿ, ಕಣ್ಮುಚ್ಚಿ ಬಿಡುವಷ್ಟರಲ್ಲಿ ನಿಮ್ಮ ದೇಹವನ್ನೇ ತಾಗಿಸಿಕೊಂಡು ಹೋದಂತೆ ಕಣ್ಮರೆ ಆಗಿಬಿಡುತ್ತದೆ !

ಕರ್ನಾಟಕದ ಪ್ರಸಿದ್ಧ ಧಾರ್ವಿುಕ ಕ್ಷೇತ್ರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ಬಹುತೇಕ ಭಕ್ತರು ಹಾಗೂ ಪ್ರವಾಸಿಗರು, ಮಾದಪ್ಪನ ತಪೋಭೂಮಿಯಾಗಿರುವ ನಾಗಮಲೆಗೆ ಟ್ರಕಿಂಗ್ ಹೋಗುತ್ತಾರೆ. ಮಹದೇಶ್ವರ ಬೆಟ್ಟದಿಂದ 14 ಕಿ.ಮೀ. ದೂರದಲ್ಲಿರುವ ನಾಗಮಲೆಯ ಮಾರ್ಗವನ್ನು ಕೆಲವರು ಸಂಪೂರ್ಣ ಕಾಲ್ನಡಿಗೆಯಲ್ಲೇ ಕ್ರಮಿಸಿದರೆ, ಇನ್ನೂ ಕೆಲವರು ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತ (7 ಕಿ.ಮೀ.) ವರೆಗೆ ಜೀಪುಗಳ ಸೌಲಭ್ಯ ಬಳಸಿಕೊಳ್ಳುತ್ತಾರೆ.

ಈ ಜೀಪುಗಳು ಸಂಚರಿಸುವ ಮಾರ್ಗ ಕೊರಕಲು ರಸ್ತೆಯಾಗಿದ್ದು, ಲೆಕ್ಕವೇ ಇಲ್ಲದಷ್ಟು ಗುಂಡಿಗಳು, ಬೃಹತ್ ಕಲ್ಲುಗಳು ಮತ್ತು ತಿರುವುಗಳಿಂದ ಕೂಡಿದೆ. ಇಲ್ಲಿನ ಗುಂಡಿಗಳಿಗೆ ಧುಮುಕಿ, ಕಲ್ಲುಗಳನ್ನು ಹತ್ತಿ, ತಿರುವುಗಳನ್ನು ಪಡೆದು ಮುಂದೆ ಹೋಗಬೇಕಾದರೆ, ಆ ವಾಹನಕ್ಕೆ ವಿಶೇಷ ಶಕ್ತಿ ಮತ್ತು ಸ್ವರೂಪ ಇರಲೇಬೇಕು. ಅಂತೆಯೆ, ಈ ಮಾರ್ಗದಲ್ಲಿ ಸಂಚರಿಸುವ ಜೀಪುಗಳನ್ನು ವಿಶಿಷ್ಟ ಮಾದರಿಯಲ್ಲಿ ರೂಪಿಸಲಾಗಿದ್ದು, ವಾಯುಮಾರ್ಗದಲ್ಲಿ ಹೆಲಿಕ್ಯಾಪ್ಟರ್ ಹಾರುವಂತೆ ಶರವೇಗದಲ್ಲಿ ಮುನ್ನುಗ್ಗುತ್ತವೆ. ಇದೇ ವೇಳೆ ಈ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ತೆರಳುವವರು ಸ್ವಲ್ಪ ಎಚ್ಚರ ತಪ್ಪಿದರೂ ಜೀಪುಗಳಿಂದ ಅವರ ಪ್ರಾಣಕ್ಕೆ ಕುತ್ತು ಖಚಿತ.

ಪ್ರಯಾಣಿಕರಿಗೂ ಇಲ್ಲ ಸುರಕ್ಷೆ

ಮಹದೇಶ್ವರ ಬೆಟ್ಟ-ನಾಗಮಲೆ ಮಾರ್ಗ ಅರಣ್ಯ ಪ್ರದೇಶ ಆಗಿರುವುದರಿಂದ ಇಲ್ಲಿ ರಸ್ತೆ ಅಭಿವೃದ್ಧಿ ಹಾಗೂ ವಾಹನಗಳ ಸಂಚಾರಕ್ಕೆ ನಿಯಮಾನುಸಾರ ಅವಕಾಶ ಇಲ್ಲ. ಆದರೆ ಮಾನವೀಯತೆ ದೃಷ್ಟಿಯಿಂದ ಸ್ವತಃ ಅರಣ್ಯ ಇಲಾಖೆಯೇ 7 ಕಿ.ಮೀ. ರಸ್ತೆಯನ್ನು ತಕ್ಕ ಮಟ್ಟಿಗೆ ವಿಸ್ತರಿಸಿ, ಸಮತಟ್ಟು ಮಾಡಿದೆ. ಅಲ್ಲದೆ, ಈ ಮಾರ್ಗದಲ್ಲಿ ಖಾಸಗಿ ಜೀಪುಗಳ ಸಂಚಾರಕ್ಕೂ ಅವಕಾಶ ಕಲ್ಪಿಸಿದ್ದು, ಒಮ್ಮೆ ಹೋಗಿ-ಬರಲು ಈ ವಾಹನಗಳಿಂದ ತಲಾ 150 ರೂ. ಶುಲ್ಕವನ್ನೂ ವಸೂಲಿ ಮಾಡಲಾಗುತ್ತಿದೆ.

ಮಹದೇಶ್ವರಬೆಟ್ಟ-ಇಂಡಿಗನತ್ತ ನಡುವೆ ಇರುವ ಕೊರಕಲು ರಸ್ತೆ.

ಗರಿಷ್ಠ 8-10 ಜನರು ಪ್ರಯಾಣಿಸಬಹುದಾದ ಈ ಜೀಪುಗಳಲ್ಲಿ ಕನಿಷ್ಠ 18 ಜನರನ್ನು ತುಂಬಿಕೊಳ್ಳುತ್ತಾರೆ. ಕೇವಲ 7 ಕಿ.ಮೀ. ಪ್ರಯಾಣಕ್ಕೆ ತಲಾ 70 ರೂ. ವಸೂಲಿ ಮಾಡುತ್ತಾರೆ. ಆದರೆ ಪ್ರಯಾಣಿಕರಿಗೆ ಮಾತ್ರ ಯಾವುದೇ ರೀತಿಯ ಸುರಕ್ಷತೆ ಇಲ್ಲವಾಗಿದೆ. ಆದ್ದರಿಂದ ಈ ಮಾರ್ಗದ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಖಾಸಗಿ ವಾಹನಗಳ ಬದಲು ಕೆಎಸ್​ಆರ್​ಟಿಸಿ ಬಸ್​ಗಳನ್ನೇ ಬಿಟ್ಟರೆ ಭಕ್ತರು, ಪ್ರಯಾಣಿಕರು ಮಾತ್ರವಲ್ಲದೆ, ಸ್ಥಳೀಯ ನಿವಾಸಿಗಳಿಗೂ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ದ್ವಿಚಕ್ರ ವಾಹನಗಳಿಗಿಲ್ಲ ಅವಕಾಶ: ಮಹದೇಶ್ವರ ಬೆಟ್ಟ-ಇಂಡಿಗನತ್ತ ಮಾರ್ಗದಲ್ಲಿ ಸ್ಥಳೀಯರ ಹೊರತಾಗಿ ಭಕ್ತರು ಅಥವಾ ಪ್ರವಾಸಿಗರಿಗೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಅನುಮತಿ ಇಲ್ಲ. ಇದಕ್ಕೆ ಅವಕಾಶ ಕಲ್ಪಿಸಿದರೆ, ದ್ವಿಚಕ್ರ ವಾಹನಗಳ ನಿಯಂತ್ರಣ ಕಷ್ಟಸಾಧ್ಯ ಎಂಬುದು ಈ ನಿರ್ಧಾರಕ್ಕೆ ಕಾರಣ.

ವಿದ್ಯಾರ್ಥಿಗಳಿಗೆ ಸಂಕಷ್ಟ

ಮಹದೇಶ್ವರ ಬೆಟ್ಟ-ನಾಗಮಲೆ ವ್ಯಾಪ್ತಿಯ ಹಳೆಯೂರು, ಕೊಂಗನೂರು, ಇಂಡಿಗನತ್ತ, ತೇಕಾಣೆ, ತುಳಸಿಕೆರೆ, ಪಡಸಲನತ್ತ, ನಾಗಮಲೆ ಇನ್ನಿತರ ಗ್ರಾಮಗಳಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳೇನೋ ಇವೆ. ಆದರೆ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗಾಗಿ ಇಲ್ಲಿನ ವಿದ್ಯಾರ್ಥಿಗಳು ಮಹದೇಶ್ವರ ಬೆಟ್ಟಕ್ಕೆ ನಡೆದುಕೊಂಡೇ ಹೋಗಬೇಕು. ಕಾಲೇಜುಗಳಿಗಾಗಿ ಹನೂರು, ಕೊಳ್ಳೇಗಾಲ, ಚಾಮರಾಜನಗರ ಅಥವಾ ಮೈಸೂರಿಗೆ ತೆರಳಬೇಕು. ಆದರೆ, ಸೂಕ್ತ ಸಾರಿಗೆ ಸೌಕರ್ಯ ಇಲ್ಲದ ಕಾರಣ ಕೆಲವರು ಅಲ್ಲಿನ ಹಾಸ್ಟೆಲ್​ಗಳನ್ನು ಆಶ್ರಯಿಸಿದರೆ, ಇನ್ನೂ ಕೆಲವರು ಶಿಕ್ಷಣವನ್ನೇ ಮೊಟಕುಗೊಳಿಸಬೇಕಾದ ಅನಿವಾರ್ಯತೆಯೂ ಇದೆ.

ಮಹದೇಶ್ವರಬೆಟ್ಟ-ಇಂಡಿಗನತ್ತ ನಡುವೆ ಸಂಚರಿಸುವ ಜೀಪುಗಳು.

ನಮ್ಮ ಊರುಗಳಿಗೆ ರಸ್ತೆ ಮತ್ತು ಸಾರಿಗೆ ಸೌಕರ್ಯದ ಅಗತ್ಯ ಬಹಳವಾಗಿದೆ. ಆದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಏನೇನೋ ಕಾರಣ, ಸಬೂಬು ಹೇಳ್ತಾರೆ. ಕೇಳಿ ಕೇಳಿ ನಮಗೂ ಸಾಕಾಗಿ ಹೋಗಿದೆ. ಆದ್ದರಿಂದ ಆ ವಿಷಯದಲ್ಲಿ ನಾವು ಸುಮ್ಮನಾಗಿಬಿಟ್ಟಿದ್ದೇವೆ. ಅದ್ಯಾವಾಗ ಅನುಕೂಲ ಮಾಡ್ತಾರೋ ನೋಡಬೇಕು. |ಪುಟ್ಟಸ್ವಾಮಿ ಹಳೆಯೂರು ಗ್ರಾಮ, ಮಹದೇಶ್ವರಬೆಟ್ಟ ದಾಖಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net