

| ಅವಿನ್ ಶೆಟ್ಟಿ ಉಡುಪಿ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ‘ಮನೆ ಮನೆ ಸಮೀಕ್ಷೆ’ ನಡೆಸುವಂತೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಆದೇಶ ನೀಡಿತ್ತು. ಆದರೆ ಜಿಲ್ಲಾ ಪಂಚಾಯಿತಿಗಳು ಅಂಗನವಾಡಿ ಕಾರ್ಯಕರ್ತರಿಗೆ ಸೀಮಿತಗೊಳಿಸಿ ಈ ಜವಾಬ್ದಾರಿಯನ್ನು ಹೊರಿಸಿದ್ದು, ಅವರು ಹಿಂದೇಟು ಹಾಕಿರುವುದರಿಂದ ಗಣತಿ ಹಳ್ಳ ಸೇರಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ವರದಿ ನೀಡಬೇಕು, ಅಂಥ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದು ಈ ಜವಾಬ್ದಾರಿಯನ್ನು ಸ್ಥಳೀಯ ಸರ್ಕಾರಗಳಿಗೆ ವಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಆದೇಶ ಹೊರಡಿಸಿತ್ತು. ಇದಕ್ಕೆ ಕಾರಣವಾಗಿರುವುದು, ಈ ಕುರಿತು ಹೈಕೋರ್ಟ್ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ‘ಗ್ರಾಮ ಶಿಕ್ಷಣ ಕಾರ್ಯಪಡೆ’ ಮೂಲಕ ಸಮೀಕ್ಷೆ ನಡೆಸಬೇಕು ಎಂದು ಪಂಚಾಯತ್ರಾಜ್ ಇಲಾಖೆ ಆದೇಶದಲ್ಲಿ ಹೇಳಿತ್ತು. ಈ ಕಾರ್ಯಪಡೆಯಲ್ಲಿ ಗ್ರಾಪಂ ಅಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಇರುತ್ತವೆ. ಡಿ.15ಕ್ಕೆ ಆರಂಭಗೊಂಡು ಜನವರಿ 15ರೊಳಗೆ ವರದಿ ನೀಡಬೇಕೆಂದು ಸೂಚಿಸಲಾಗಿತ್ತು. ಈ ಗಣತಿಗೆಂದೇ ಪ್ರತ್ಯೇಕ ಆಪ್ ಕೂಡ ತಯಾರಿಸಲಾಗಿದೆ.
ಗ್ರಾಪಂ ಶಿಕ್ಷಣ ಕಾರ್ಯಪಡೆಯ ಇತರೆಲ್ಲರಿಗೂ ಕೆಲಸದ ಒತ್ತಡಗಳಿವೆ. ಅಂಗನವಾಡಿ ಇನ್ನೂ ಆರಂಭ ಆಗದಿರುವುದರಿಂದ ಅವರೇ ಗಣತಿ ನಡೆಸಬೇಕು ಎಂಬುದು ಜಿಲ್ಲಾ ಪಂಚಾಯಿತಿಗಳ ಸೂಚನೆ. ಆದರೆ ಅಂಗನವಾಡಿ ನೌಕರರು ಅವರ ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಗಣತಿಯನ್ನು ನಮಗೆ ಯಾಕೆ ವಹಿಸಿದ್ದೀರಿ? ಹೇಗೂ ಶಾಲೆಗಳು ಇನ್ನೂ ಪೂರ್ಣವಾಗಿ ಆರಂಭಗೊಂಡಿಲ್ಲ, ಶಿಕ್ಷಕರಿಂದಲೇ ಮಾಡಿಸಿ ಎಂದು ಸಮೀಕ್ಷೆಯಿಂದ ದೂರವೇ ಉಳಿದಿದ್ದಾರೆ.
ಜಲಜೀವನ್ ಮಿಷನ್, ಶುದ್ಧ ಕುಡಿಯುವ ನೀರು ಪೂರೈಕೆ ಸಮೀಕ್ಷೆ, 2011 ಜನಗಣತಿ ಈಸ್ ಆಫ್ ಲಿವಿಂಗ್ ಜಿಪಿಎಸ್ ಆಧರಿತ ಸಮೀಕ್ಷೆ, ವಿಪಿಆರ್ಪಿ ಸಮೀಕ್ಷೆ ನಡೆಯುತ್ತಿದೆ. ಗ್ರಾಪಂ ಸಿಬ್ಬಂದಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದರಲ್ಲಿ ತೊಡಗಿದ್ದು, ಈ ಸಮೀಕ್ಷೆಗಳು ಮುಗಿದಿಲ್ಲ. ಇದುವರೆಗೆ ಚುನಾವಣೆ ಒತ್ತಡದಿಂದ ಯಾವ ಕೆಲಸಗಳೂ ಸರಿಯಾಗಿ ನಡೆದಿಲ್ಲ. ಇನ್ನೆರಡು ತಿಂಗಳಲ್ಲಿ ವಾರ್ಷಿಕ ಲೆಕ್ಕಾಂತ್ಯ, ಕಾಮಗಾರಿ ಬಿಲ್ಲುಗಳ ಪಾವತಿ, ತೆರಿಗೆ ಸಂಗ್ರಹದ ಒತ್ತಡದಲ್ಲಿ ಗ್ರಾಪಂಗಳಿವೆ. ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಜವಾಬ್ದಾರಿಯನ್ನೂ ನೀಡಿರುವುದರಿಂದ ಗ್ರಾಪಂಗಳು ಇಕ್ಕಟ್ಟಿಗೆ ಸಿಲುಕಿವೆ. ಅತ್ತ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಕೆಲಸಗಳಲ್ಲೇ ವ್ಯಸ್ತರಾಗಿದ್ದಾರೆ. ಕೋವಿಡ್-19 ಕುರಿತ ತಳಮಟ್ಟದ ಕಾರ್ಯಗಳನ್ನು ಮಾಡಬೇಕಿರುವುದರಿಂದ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿಲ್ಲ.
ಅಂಗನವಾಡಿ ನೌಕರರ ಸಮಸ್ಯೆಯೇ ಬೇರೆ. ಕೆಲಸದ ಒತ್ತಡದ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡ ಅಂಗನವಾಡಿ ನೌಕರರು, ‘ಸ್ನೇಹ’ ಎಂಬ ಆಪ್ನಲ್ಲಿ 0ರಿಂದ 6 ವರ್ಷದ ಮಕ್ಕಳ ದಾಖಲೆ ಪ್ರತೀ ತಿಂಗಳು ನಿರ್ವಹಿಸುತ್ತಿದ್ದೇವೆ. ಇದು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುತ್ತದೆ. 6ರಿಂದ 18 ವರ್ಷದವರೆಗಿನ ಗಣತಿ ಶಿಕ್ಷಣ ಇಲಾಖೆ ಮಾಡಬೇಕು, ಅದನ್ನು ಅವರೇ ಮಾಡಲಿ. ನಮಗೆ ಆಹಾರ ವಿತರಣೆ, ಮಕ್ಕಳ ತೂಕ, ಆರೋಗ್ಯ ಕಾರ್ಯಕ್ರಮ, ಮಾತೃವಂದನಾ, ಪೋಷಣ್ ಅಭಿಯಾನದಲ್ಲಿ ಸಾಕಷ್ಟು ಕೆಲಸಗಳಿವೆ ಎನ್ನುತ್ತಾರೆ. ‘ಅಂಗನವಾಡಿ ನೌಕರರರಿಗೆ ಇಲಾಖೇತರ ಕೆಲಸ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂಗನವಾಡಿ ಕೆಲಸವೇ ಸಾಕಷ್ಟು ಇರುವ ಕಾರಣ, ಈ ಗಣತಿ ಕಾರ್ಯ ಸಾಧ್ಯವಿಲ್ಲ ಎಂಬುದನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಗಮನಕ್ಕೆ ತಂದಿದ್ದೇವೆ’ ಎಂದು ಉಡುಪಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸುಶೀಲಾ ನಾಡ ಪ್ರತಿಕ್ರಿಯಿಸಿದ್ದಾರೆ.