

| ಮರಿದೇವ ಹೂಗಾರ ಹುಬ್ಬಳ್ಳಿ
ಕರೊನಾ ಒತ್ತಡದ ಮಧ್ಯೆಯೂ ಇಲ್ಲಿನ ಕಿಮ್ಸ್ ಶಸ್ತ್ರ ಚಿಕಿತ್ಸೆ ನಡೆಸಿದ್ದು, ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ರ‍್ಯಾಂಕ್ ಗಳಿಸಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಮೈಸೂರು ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಗಳಿಸಿವೆ.
2020 ಏಪ್ರಿಲ್ 1ರಿಂದ ನವೆಂಬರ್ 12ರವರೆಗೆ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದನ್ನು ಗಣನೆಗೆ ತೆಗೆದುಕೊಂಡಿದೆ. ಮೆಡಿಸಿನ್, ಕೋವಿಡ್, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಹೃದ್ರೋಗ, ಎಲುಬು ಮತ್ತು ಕೀಲು ವಿಭಾಗದಲ್ಲಿ ಹೆಚ್ಚು ಶಸ್ತ್ರ ಚಿಕಿತ್ಸೆಗಳು ನಡೆಸಿರುವುದನ್ನು ಗುರುತಿಸಿದೆ. ಪ್ರಥಮ ಮತ್ತು ತುರ್ತು ಹಂತದ ಶಸ್ತ್ರ ಚಿಕಿತ್ಸೆಗಳೇ ಹೆಚ್ಚು ನಡೆದಿದ್ದು, ಒಟ್ಟು 6557 ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಹೆಗ್ಗಳಿಕೆ ಹೊಂದಿದೆ. ಕೋವಿಡ್ ಸೋಂಕು ತಾಗಿದ್ದ ಗರ್ಭಿಣಿಯರು, ಇತರೆ ಶಸ್ತ್ರ ಚಿಕಿತ್ಸೆಯವರು ಇದರ ಲಾಭ ಪಡೆದಿದ್ದಾರೆ. ಇದರಿಂದ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆ ಅಡಿ ಒಟ್ಟು 8,06,52,475 ಹಣ ಜಮೆಯಾಗಿದೆ.
ಕೋವಿಡ್ ವೇಳೆ ವೈದ್ಯರು ತಮ್ಮ ಕರ್ತವ್ಯದ ಜತೆ ಜತೆಗೆ ಎಬಿಎಆರ್ಕೆ ನಿರ್ವಹಣೆಯನ್ನೂ ಉತ್ತಮವಾಗಿ ಮಾಡಿದ್ದಾರೆ. ಇವರೊಟ್ಟಿಗೆ ಇದೇ ಯೋಜನೆ ಅನುಷ್ಠಾನಕ್ಕೆ ಒಂದು ತಂಡ ರಚಿಸಲಾಗಿದೆ. ರೋಗಿಯನ್ನು ಪತ್ತೆ ಹಚ್ಚುವುದರಿಂದ ಹಿಡಿದು ಸರ್ಕಾರದಿಂದ ಹಣ ಜಮೆ ಆಗುವವರೆಗೆ ನಿರಂತರ ಪ್ರಕ್ರಿಯೆಯಲ್ಲಿರುತ್ತದೆ. ಕೋವಿಡ್ ಪೂರ್ವ ಶಸ್ತ್ರಚಿಕಿತ್ಸೆಯಲ್ಲಿ ರಾಜ್ಯದಲ್ಲಿ 2 ಇಲ್ಲವೇ 3 ರ‍್ಯಾಂಕ್ ಪಡೆಯುತ್ತಿದ್ದ ಕಿಮ್್ಸ ಈ ಸಲ ಪ್ರಥಮ ರ‍್ಯಾಂಕ್ ಪಡೆದಿದೆ ಎಂದು ಖುಷಿಪಡುತ್ತಾರೆ ಕಿಮ್್ಸ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ.
ಕಿಮ್ಸ್ ಕೋವಿಡ್ ಆಸ್ಪತ್ರೆಯೆಂದು ರಾಜ್ಯ ಸರ್ಕಾರ ಪ್ರಕಟಿಸಿತ್ತು. ಇದರ ಮಧ್ಯೆ ನಾನ್ ಕೋವಿಡ್ ರೋಗಿಗಳಿಗೂ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಪ್ರತಿ ಹಂತದಲ್ಲೂ ವೈದ್ಯರು ಮತ್ತು ವೈದ್ಯಕೀಯ ತಂಡದ ಶ್ರಮದ ಫಲವಾಗಿ ಎಬಿಎಆರ್ಕೆಯಲ್ಲಿ ಪ್ರಥಮ ರ‍್ಯಾಂಕ್ ಬಂದಿದೆ. | ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್ಸ್ ನಿರ್ದೇಶಕ