

ಮೊಳಕಾಲ್ಮೂರು: ನಾಡಿನ ಪರಂಪರೆಯಲ್ಲಿ ಸ್ವಾವಲಂಬಿ ಬದುಕಿಗೆ ತನ್ನದೆ ಆದ ಕೊಡುಗೆ ಕೈಮಗ್ಗ ನೇಕಾರರು ನೀಡಿದ್ದಾರೆ ಎಂದು ಮಳವಳ್ಳಿ ಮಂಟೆಸ್ವಾಮಿ ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ಶ್ರೀಕಂಠ ಸಿದ್ದಲಿಂಗ ರಾಜೇ ಅರಸು ಅಭಿಪ್ರಾಯಪಟ್ಟರು.
ಪತ್ನಿ ಸುಷ್ಮಾ ಗುಬ್ಬಿ ವಾಣಿ ಜತೆ ಪಟ್ಟಣಕ್ಕೆ ಗುರುವಾರ ಭೇಟಿ ನೀಡಿದ್ದ ಅವರು, ನೇಕಾರಿಕೆಗೆ ರಾಜ್ಯ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು. ಅವರಿಗೆ ಸರ್ಕಾರದ ಆಸರೆ ಬೇಕಾಗಿದೆ ಎಂದರು.
ಜಾಗತಿಕ ಕಾಲಘಟ್ಟದಲ್ಲಿ ಹೊಸ ತಂತ್ರಜ್ಞಾನದ ಫವರ್ ಲೂಮ್ ಹಾವಳಿಯಿಂದ ಕೈಮಗ್ಗದ ರೇಷ್ಮೆ, ಕಾಟನ್ ಉತ್ಪಾದನೆ ಹಾಗೂ ಸಿದ್ದ ಉಡುಪು ತಯಾರಿಕೆ ಕುಸಿತ ಕಂಡಿರುವುದು ಆತಂಕದ ವಿಷಯ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸಹಸ್ರಾರು ಕುಟುಂಬಗಳ ಬದುಕನ್ನು ಕಸಿದುಕೊಂಡಂತಾಗಿದೆ ಎಂದು ಹೇಳಿದರು.
ಟೆಕ್ಸ್‌ಟೈಲ್ಸ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚು ಮಹತ್ವ ಕೊಟ್ಟಂತೆ ರಾಜ್ಯ ಸರ್ಕಾರವೂ ನೀಡಬೇಕು. ನೇಕಾರಿಕೆ ಅಂದರೆ ಜೀವನೋಪಾಯದ ಕ್ಷೇತ್ರವಲ್ಲ. ಇಡೀ ಮಾನವ ಕುಲದ ಮಾನ ಮುಚ್ಚುವಂತ ಪ್ರವಿತ್ರ ಕೆಲಸ ಎಂದರು.
ರಾಜ್ಯ ಸರ್ಕಾರದ ಜವಳಿ ಮತ್ತು ಕೈಮಗ್ಗ ಇಲಾಖೆ, ನೇಕಾರರಿಗೆ ಅನೇಕ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಅರ್ಹರಿಗೆ ತಲುಪದೆ ಹಾದಿ ತಪ್ಪುತ್ತಿವೆ. ಶ್ರಮಪಡುವ ಮಂದಿಗೆ ಕೂಲಿ ಕೂಡ ಗಿಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು.
ಆಧುನೀಕ ಪದ್ಧತಿಗೆ ಅನುಗುಣವಾಗಿ ಸರ್ಕಾರದಿಂದ ಎಲ್ಲ ರೀತಿಯ ನೆರವು ಸಿಕ್ಕರೆ ರೈತ ಸಮುದಾಯ ಹಾಗೂ ನೇಕಾರರ ಬದುಕು ಹಸನಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿ, ಯೋಜನೆ ರೂಪಿಸಬೇಕು. ಇಲ್ಲಿನ ಪರಿಸ್ಥಿತಿ ಅಧ್ಯಯನ ನಡೆಸಿ, ಸಂಪೂರ್ಣ ವರದಿಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಮೊಳಕಾಲ್ಮೂರು ಸೀರೆ ಪರಿಶುದ್ಧತೆ ಕಾರಣಕ್ಕೆ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಈ ಕೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಿ ನೇಕಾರರ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ತಿಳಿಸಿದರು.
ನನ್ನ ಪತ್ನಿ ಸುಷ್ಮಾ ವಿನ್ಯಾಸ ಪದವೀಧರೆಯಾಗಿದ್ದು ಟೆಕ್ಸ್‌ಟೈಲ್ಸ್ ಕ್ಷೇತ್ರದ ಕುರಿತು ಅಪಾರ ಕಾಳಜಿ ಹೊಂದಿದ್ದಾರೆ. ಆಧುನಿಕ ಶೈಲಿಯಲ್ಲಿ ಗಮನ ಸೆಳೆಯುವಂತ ಉತ್ಪಾದನೆ ಹೇಗೆ ಮಾಡುವುದು ಕುರಿತು ಆವಿಷ್ಕಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೇಕಾರರ ನೈಪುಣ್ಯ ಅರಿಯಲು ಇಳಕಲ್, ಸುಳೇಬಾವಿ, ಗುಳೇದಗುಡ್ಡ, ಕಮಟಗಿ, ಕೊಪ್ಪಳ ಸೇರಿ ಅಧ್ಯಯನ ಮಾಡಲಾಗಿದೆ. ಅದೇ ರೀತಿ ಮೊಳಕಾಲ್ಮೂರಿಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.
ಪ್ರಗತಿಪರ ರೈತ ಬಿ.ಜಿ.ಕೆರೆ ವೀರಭದ್ರಪ್ಪ ಅವರ ಜಮೀನಿಗೆ ಭೇಟಿ ನೀಡಿ ಕೃಷಿ ಕಾಯಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಸಂಸ್ಥಾನಕ್ಕೂ ಮೊಳಕಾಲ್ಮೂರಿಗೂ ಹತ್ತಿರದ ನಂಟು ಇತ್ತು. ಜಯಚಾಮರಾಜ ಒಡೆಯರ್ ಆಳ್ವಿಕೆಯಲ್ಲಿ ಇಲ್ಲಿನ ಮೇಲ್ದುರ್ಗದ ಕೆರೆ ನಿರ್ಮಾಣವಾಗಿತ್ತು. ಅದರ ಕಾಯಕಲ್ಪದ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.