

ಧನಂಜಯ ಗುರುಪುರ
ಹಿಂದೆ ಭಾರತೀಯ ಪರಂಪರೆಯಲ್ಲಿ ಕೈಮಗ್ಗದ ವಸ್ತ್ರಕ್ಕೆ ಬೇಡಿಕೆ ಇತ್ತು. ಆಗ ಗ್ರಾಮೀಣ ಪ್ರದೇಶಗಳಲ್ಲಿ ಕೈಮಗ್ಗ ನೇಕಾರಿಕೆ ಹೇರಳವಾಗಿತ್ತು. ಆಧುನಿಕ ತಂತ್ರಜ್ಞಾನ ಮತ್ತು ನವೀನ ಮಾದರಿಯ ಬಟ್ಟೆಬರೆ ಮಾರುಕಟ್ಟೆಗೆ ದಾಪುಗಾಲಿಡುತ್ತಲೇ ಕೈಮಗ್ಗ ಉದ್ಯಮವು ‘ನೂಲುವ ಕೌಶಲ’ದಿಂದ ದೂರ ಸರಿಯಲಾರಂಭಿಸಿತು. ಬೇಡಿಕೆ ಕ್ಷೀಣಿಸಿದ ಕೈಮಗ್ಗ ಉದ್ಯಮ ಈಗ ಲಾಭದಾಯಕವಾಗಿ ಉಳಿದಿಲ್ಲ.
ಸುಮಾರು 40 ವರ್ಷಗಳ ಹಿಂದೆ ಗುರುಪುರದಲ್ಲಿ, ಇತ್ತೀಚಿನ ವರ್ಷಗಳವರೆಗೆ ಎಡಪದವಿನಲ್ಲಿ ಹಾಗೂ ಸುತ್ತಲ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕೈಮಗ್ಗದ ಮನೆಗಳು ಕಂಡು ಬರುತ್ತಿದ್ದವು. ಆದರೆ ಈಗ ಅವು ನಾಮಾವಶೇಷಗೊಂಡಿವೆ. ಹೊಸದಾಗಿ ಈ ಉದ್ಯಮಕ್ಕೆ ಮುಂದೆ ಬರುವವರಿಲ್ಲ. ಇದುವರೆಗೆ ಸ್ಟಾರ್ಟ್-ಅಪ್ ಉದ್ಯಮಿಗಳು ಕೈಮಗ್ಗದ ಅಳಿವು-ಉಳಿವಿನ ಬಗ್ಗೆ ಹೆಚ್ಚಿನ ಒಲವು ತೋರಿಸಿಲ್ಲ. ಸದ್ಯ 50 ದಾಟಿರುವ, ಹಿಂದಿನಿಂದಲೂ ನೇಕಾರಿಕೆ ನಡೆಸಿಕೊಂಡು ಬರುತ್ತಿರುವ ಬೆರಣಿಕೆಯ ಮಂದಿ ಮಾತ್ರ ಕೈಮಗ್ಗ ಕ್ಷೇತ್ರದಲ್ಲಿ ಉಳಿದುಕೊಂಡಿದ್ದಾರೆ.
ಕೈಮಗ್ಗ ಉದ್ಯಮ ನಿಧಾನ. ಅಬ್ಬಾ ಎಂದರೆ, ಬೆಳಗ್ಗೆ ಆರಂಭಿಸಿದರೆ ಸಂಜೆ ಹೊತ್ತಿಗೆ ಒಂದು ಸಾಮಾನ್ಯ ಸೀರೆ ಸಿದ್ಧಗೊಳ್ಳುತ್ತದೆ. ಇದರಲ್ಲಿ ಹಲವರ ಶ್ರಮವಿರುತ್ತದೆ. ಒಂದು ಸೀರೆ 500ರಿಂದ 1000 ರೂ. ಬೆಲೆ ಇದೆ. ಈಗ ಬೆಲೆ ಹೆಚ್ಚಾಗಿದೆ. ನೇಕಾರರ ಸೇವಾ ಸಹಕಾರಿ ಸಂಘದ ಮೂಲಕ ಈ ಸೀರೆಗಳ ಮಾರಾಟ ಮಾಡಲಾಗುತ್ತದೆ. ಹಾಗಾಗಿ ಈ ಉದ್ಯಮಕ್ಕೆ ಹೊಸಬರು ಬರುವುದಿಲ್ಲ. ಅಚ್ಚರಿಯೆಂದರೆ, ಹಿಂದಿನಿಂದಲೂ ನೇಕಾರಿಕೆಯಲ್ಲಿರುವವರೂ ಕೈಮಗ್ಗದಿಂದ ವಿಮುಖರಾಗುತ್ತಿದ್ದಾರೆ.
ಪಾಶ್ಚಾತ್ಯೀಕರಣದ ಹೊಡೆತ: ದೇಶದಲ್ಲಿ ಎಲ್ಲ ರಂಗದಲ್ಲೂ ವಿದೇಶಿ ವಸ್ತುಗಳಿಗೆ ಬೇಡಿಕೆ ಬಂದಿರುವಂತೆ ವಸ್ತ್ರೋದ್ಯಮದಲ್ಲೂ ವಿದೇಶಿ ಬಟ್ಟೆಬರೆ ಹಾಸುಹೊಕ್ಕಾಗಿದೆ. ವಿದೇಶಿ ಬಟ್ಟೆ ಧರಿಸಿದರೆ ಗೌರವ ಹೆಚ್ಚಾಗುತ್ತದೆ ಎಂಬ ಮನೋಭಾವದಿಂದ ಗ್ರಾಮೀಣ ವಸ್ತ್ರೋದ್ಯಮ ಸೊರಗಲಾರಂಭಿಸಿದೆ. ಅದೇನೇ ಇದ್ದಾಗಲೂ, ಭಾರತದಲ್ಲಿ ಕೈಮಗ್ಗವೇ ವಿಭೃಂಜಿಸಿದ ದಿನಗಳಿದ್ದವು ಎಂಬುದು ಇತಿಹಾಸದ ಪುಟ ತಿರುವಿದಾಗ ತಿಳಿದು ಬರುತ್ತದೆ.
ಏನೇ ಇದ್ದಾಗಲೂ ದೇಶೀಯ ಹವಾಮಾನಕ್ಕೆ ಪೂರಕವಾದ, ಶರೀರಕ್ಕೆ ಹಿತವೆನಿಸುವ ಮಗ್ಗದ ವಸ್ತ್ರಗಳ ತಯಾರಿಕೆಗೆ ಸರ್ಕಾರದಿಂದ ಹೆಚ್ಚು ಉತ್ತೇಜನದ ಅಗತ್ಯವಿದೆ. ಈ ಉದ್ಯಮದಲ್ಲೂ ವಿದೇಶಿ ಬಟ್ಟೆಬರೆಯ ಕೌಶಲ ಸಾಧ್ಯವಿದೆ. ಆದರೆ ಅದಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಬೇಕಷ್ಟೆ.
ಬೇಡಿಕೆ ಹೆಚ್ಚಿಸಲು ಸಾಧ್ಯ
ಕೈಮಗ್ಗ ಸೀರೆಗಳ ಕಚ್ಚಾವಸ್ತುಗಳು ಕಡಿಮೆ ದರದಲ್ಲಿ ಲಭ್ಯವಾದಲ್ಲಿ, ಮಗ್ಗದ ಸೀರೆಗಳ ಬೆಲೆ ಇಳಿಸಿ, ಬೇಡಿಕೆ ಹೆಚ್ಚಿಸಲು ಸಾಧ್ಯವಿದೆ. ನೇಕಾರರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ಹಾಗಾಗಿ ನಷ್ಟದಲ್ಲಿ ಉದ್ಯಮ ಮುಂದುವರಿಸಲು ಹೊಸಬರು ಈ ಕ್ಷೇತ್ರಕ್ಕೆ ಬರುತ್ತಿಲ್ಲ ಎಂಬ ಆರೋಪವೂ ಇದೆ.
ಹೆಚ್ಚು ದುಡಿಮೆ, ಕಡಿಮೆ ಆದಾಯದ ಉದ್ಯಮ ನೇಕಾರಿಕೆ. ಹೊಸಬರಿಗೆ ಇದು ಬೇಡವಾಗಿದೆ. ಹಿರಿಯರಿಂದ ಬಂದಿರುವ ಉದ್ಯಮ ಮುಂದುವರಿಸುತ್ತಿದ್ದೇವೆ. ಇದು ಮಕ್ಕಳಿಗೂ ಬೇಡವಾಗಿದ್ದು ಉದ್ಯಮ ನಮ್ಮಲ್ಲೇ ತೆವಳುತ್ತಿದೆ. ಮುಕುಂದ ಶೆಟ್ಟಿಗಾರ್, ಲಕ್ಷ್ಮೀ ಮಿಜಾರು ದಡ್ಡಿ ಕ್ರಾಸ್ನ ಕೈಮಗ್ಗ ನೇಕಾರಿಕೆ ದಂಪತಿ ಸರ್ಕಾರದಿಂದ ನೇರವಾಗಿ ನೇಕಾರರಿಗೆ ಯಾವುದೇ ಪ್ರೋತ್ಸಾಹ ಧನ ಸಿಗುವುದಿಲ್ಲ. ಸಹಕಾರಿ ಸಂಘ ಮಾರಾಟ ಮಾಡುವ ಸೀರೆಗಳಿಗೆ ಸರ್ಕಾರ ನೀಡುವ ಶೇ.20 ರಿಯಾಯತಿ ಮೊತ್ತ ಸಂಘಕ್ಕೆ ಬರುತ್ತದೆ. ಅದು ಸಂಘದ ಕೆಲಸಗಳಿಗೆ ವ್ಯಯವಾಗುತ್ತಿದೆ. ನೇಕಾರರಿಗೆ ಸರ್ಕಾರ ನೇರವಾಗಿ ಪ್ರೋತ್ಸಾಹ ಧನ ನೀಡಿದರೆ, ಕೈಮಗ್ಗದ ಸೀರೆಗಳಿಗೆ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಿದೆ. ಆಗಲೂ ಬೇಡಿಕೆ ತಕ್ಕಷ್ಟು ಉತ್ಪಾದನೆ ಕಷ್ಟಸಾಧ್ಯ. ಮಾಧವ ಶೆಟ್ಟಿಗಾರ್ ತಾಳಿಪಾಡಿಯ ನೇಕಾರರ ಸೇವಾ ಸಂಘ ನಿರ್ದೇಶಕ