

ದೊಡ್ಡಬಳ್ಳಾಪುರ: ನೇಕಾರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ನೇಕಾರರ ಸಂಘಟನೆಗಳು, ನೇಯ್ಗೆ ಕೂಲಿ ಕಾರ್ಮಿಕರು, ನೇಕಾರರ ಹಿತರಕ್ಷಣಾ ಸಮಿತಿ ಸದಸ್ಯರು ಸೋಮವಾರ ಪ್ರತಿಭನಾ ರ‌್ಯಾಲಿ ನಡೆಸಿ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನೇಕಾರರ ಹಿತರಕ್ಷಣಾ ಸಮಿತಿ ಸದಸ್ಯ ವೆಂಕಟೇಶ್ ಮಾತನಾಡಿ, ನೇಕಾರರ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ. ಕೇಂದ್ರ ಸರ್ಕಾರ ನೋಟ್ ಬ್ಯಾನ್ ಜಾರಿಗೆ ತಂದಾಗಿನಿಂದಲೂ ನೇಕಾರರ ಬದುಕು ದಿವಾಳಿ ಅಂಚಿಗೆ ತಲುಪಿದೆ. ಇದರ ಜತೆಗೆ ಜಿಎಸ್‌ಟಿ ದೊಡ್ಡ ಹೊಡೆತ ಕೊಟ್ಟಿದೆ. ಈಗ ಕರೊನಾ ವೈರಸ್ ಮಹಾಮಾರಿ ಬಡ ನೇಕಾರರ ಬದುಕನ್ನೇ ನುಂಗಿಹಾಕಿದೆ. ನೇಕಾರರ ಬದುಕು ಇಂದು ಉಪವಾಸದಿಂದ ಸಾಯಬೇಕು, ಇಲ್ಲವೆಂದರೆ ವೈರಸ್‌ನಿಂದ ಸಾಯಬೇಕು ಎಂಬಾಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ ನೇಕಾರರ ಕಡೆಗೂ ಒಮ್ಮೆ ಗಮನ ಹರಿಸಬೇಕು ಎಂದರು.
ರಾಜ್ಯ ಸರ್ಕಾರ ಪ್ರತಿ ನೇಕಾರ ಮತ್ತು ನೇಯ್ಗೆ ಕಾರ್ಮಿಕರ ಕುಟುಂಬಕ್ಕೆ 7,500 ರೂ. ಪರಿಹಾರ ಕೊಡಲಿ. ನೆರೆಯ ರಾಜ್ಯಗಳಲ್ಲಿ ನೀಡುತ್ತಿರುವಂತೆ 16 ಅಗತ್ಯ ಜೀವನವಶ್ಯಕ ವಸ್ತಗಳನ್ನು ಉಚಿತವಾಗಿ ನೀಡಲಿ. ವಿದ್ಯುತ್ ಬಿಲ್‌ಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಅವೈಜ್ಞಾನಿಕ ಬಿಲ್‌ಗಳನ್ನು ಹಿಂಪಡೆಯಬೇಕು. ನೇಕಾರರು ನೇಯ್ದ ಬಟ್ಟೆಗಳನ್ನು ಅಡಮಾನವಾಗಿ ಇಟ್ಟುಕೊಂಡು ಹಣಕಾಸು ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಜಿಎಸ್‌ಟಿಯಿಂದ ಕನಿಷ್ಠ 5 ವರ್ಷಗುಡಿ ಕೈಗಾರಿಕೆಯಾದ ನೇಯ್ಗೆ ಉದ್ಯಮಕ್ಕೆ ವಿನಾಯಿತಿ ನೀಡಬೇಕು. ನೇಯ್ಗೆಯಲ್ಲಿರುವ ಎಲ್ಲ ಅಸಂಘಟಿತ ಕಾರ್ಮಿಕರನ್ನು ಪರಿಗಣಿಸಿ ಜವಳಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು. ಪಕ್ಕದ ರಾಜ್ಯಗಳಲ್ಲಿ ತಿಂಗಳಿಗೆ 2 ಸಾವಿರ ರೂ. ಗಳಂತೆ ವರ್ಷಕ್ಕೆ 24 ಸಾವಿರ ನೀಡುತ್ತಿವೆ. ಇದರ ಜತೆಗೆ ಉಚಿತ ವಿದ್ಯುತ್ ನೀಡಿದ್ದಾರೆ. ಇದೇ ರೀತಿ ನಮ್ಮ ರಾಜ್ಯದಲ್ಲೂ ಪವರ್‌ಲೂಂ ನೇಕಾರರಿಗೂ ಸಿಗುವಂತಾಗಬೇಕು. ಅರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಪ್ರವೇಶ ಶುಲ್ಕ ಹಾಗೂ ಇತರೆ ಶುಲ್ಕಗಳಿಂದ ವಿನಾಯಿತಿ ನೀಡಬೇಕು. ನೇಕಾರರು ಮತ್ತು ಅವರ ಕುಟುಂಬ ಅನಾರೋಗ್ಯಕ್ಕೆ ತುತ್ತಾದವರಿಗೆ ಸಂಪೂರ್ಣ ಉಚಿತ ಆರೋಗ್ಯ ಸೌಲಭ್ಯ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯ್ಕ, ಸಿ.ಪಿ.ಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್,
ಜೆಡಿಎಸ್. ಜಿಲ್ಲಾಧಕ್ಷ ಬಿ. ಮುನೇಗೌಡ, ತ.ನ ಪ್ರಭು, ವಕೀಲ ಕೃಷ್ಣಮೂರ್ತಿ, ರವಿ ಮಾವಿನಕುಂಟೆ ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
ಪೊಲೀಸರ ಮನವಿ: ಹೆಚ್ಚು ನೇಕಾರರು ಪ್ರತಿಭಟನೆಯ ರ‌್ಯಾಲಿಯಲ್ಲಿ ಭಾಗವಹಿಸಿದಂತೆ ದೊಡ್ಡಬಳ್ಳಾಪುರ-ದೇವನಹಳ್ಳಿ ಮುಖ್ಯರಸ್ತೆಯ ರಘುನಾಥಪುರದಲ್ಲಿ ಪೊಲೀಸರು ತಡೆಹಿಡಿದರು. ಸೆಕ್ಷನ್ 144 ಜಾರಿ ಇರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಬೇಡಿ ಸಲ್ಲಿಕೆಗೆ ತೊಂದರೆ ನೀಡುವುದಿಲ್ಲ. ಶಾಂತಿಯುತವಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ರಾಘವ ಎಸ್.ಗೌಡ ಮನವಿ ಮಾಡಿದರು.