ಬೇಡಿಕೆ ಈಡೇರಿಸಲು ಆಗ್ರಹಿಸಿ ನೇಕಾರರಿಂದ ಪ್ರತಿಭಟನೆ

NEKAARARU
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಲ್ಲಿಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್​ಡಿಸಿ)ದ ಪ್ರಧಾನ ಕಚೇರಿ ಎದುರು ನೇಕಾರರು ಸೋಮವಾರ ದಿನವೀಡಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಧಾರವಾಡ, ಬಾಗಲಕೋಟ, ವಿಜಯಪುರ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ನೇಕಾರರು ಪಾಲ್ಗೊಂಡಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ವರ್ಣಿತ ನೇಗಿ ಹಾಗೂ ಅಧಿಕಾರಿಗಳು ನೇಕಾರರೊಂದಿಗೆ ಚರ್ಚೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಆದರೆ, ಜವಳಿ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಮಾತನಾಡಿಸಬೇಕೆಂದು ಪಟ್ಟು ಹಿಡಿದ ನೇಕಾರರು ಸಂಜೆಯವರೆಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳದಲ್ಲಿಯೇ ಮಧ್ಯಾಹ್ನ ಉಪಹಾರ ಸೇವಿಸಿದರು. ನಿಗಮದೊಂದಿಗೆ ನೇಕಾರಿಕೆ ಮಾಡುವ ನೇಕಾರರಿಗೆ ನಿವೇಶನ ಹಂಚಿಕೆ ಮಾಡಬೇಕು, ನಿವೇಶನ ಹಂಚಿಕೆ ಮಾಡಿದವರಿಗೆ ಸಿಟಿಎಸ್ ಉತಾರ ಹಾಗೂ ಹಕ್ಕುಪತ್ರಗಳನ್ನು ವಿತರಿಸಬೇಕು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ ಯೋಜನೆಯಂತೆ ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ನಿಗಮದಿಂದ ಮಕ್ಕಳ ಸಮವಸ್ತ್ರ ಬಟ್ಟೆ ಖರೀದಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡದಿದ್ದು, ಈ ಕುರಿತು ಮರು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. 55 ವರ್ಷ ಮೀರಿದ ನೇಕಾರರಿಗೆ ಮಾಸಿಕ 5 ಸಾವಿರ ರೂ. ಗಳ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಕಟ್ಟಡ ಕಾರ್ವಿುಕರ ಮಾದರಿಯಲ್ಲೇ ನೇಕಾರರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು, ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಯವರಿಗೆ ರವಾನಿಸಲಾಗಿದೆ.

ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, 40 ವರ್ಷಗಳ ಹಿಂದೆ ರಾಜ್ಯದಲ್ಲಿ 48 ಸಾವಿರ ಜನ ನೇಕಾರಿಕೆ ಮಾಡುತ್ತಿದ್ದರು. ಈಗ 4,100 ಜನರು ಮಾತ್ರ ಇದ್ದಾರೆ. ಉಳಿದವರು ನೇಕಾರಿಕೆ ಬಿಟ್ಟು ಬೇರೆ ಬೇರೆ ಉದ್ಯೋಗಗಳಲ್ಲಿ ತೋಡಗಿಸಿಕೊಂಡಿದ್ದಾರೆ. ಕಳೆದ 1 ವರ್ಷದಲ್ಲಿ 56 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲ ಪಕ್ಷಗಳು ರಾಜ್ಯಕೀಯ ಉದ್ದೇಶಕ್ಕಾಗಿ ನೇಕಾರರನ್ನು ಬಳಸಿಕೊಳ್ಳುತ್ತ ಬಂದಿದೆ ಎಂದು ಆರೋಪಿಸಿದರು.

ಸದಾಶಿವ ಗೊಂಧಕರ, ಮಲ್ಲಿಕ್ ಜಮಾದಾರ, ಶ್ರೀಶೈಲ ಮುಗಳಿ, ನಾಗಪ್ಪ ಬನ್ನಿಗಿಡದ, ರಾಜು ಕೊಪ್ಪಳದ, ಮೆಹಬೂಬ ಚಳಮರದ, ಪ್ರೇಮನಾಥ ಕೋಪರ್ಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net