ನೇಕಾರರ ಹಿತಕ್ಕಾಗಿ ಹೊಸ ಜವಳಿ ನೀತಿ

Shivanand
ಜವಳಿ ಸಚಿವ ಶಿವಾನಂದ ಪಾಟೀಲ ಅವರು ಹುಕ್ಕೇರಿ ತಾಲೂಕು ಬುಗಟಿ ಆಲೂರಿನಲ್ಲಿರುವ ಪಶುಪತಿನಾಥ ಟೆಕ್ಸ್‌ಟೈಲ್ ಯೂನಿಟ್‌ಗೆ ಭೇಟಿ ನೀಡಿ ಏರ್‌ಜೆಟ್ ಮಗ್ಗ ವೀಕ್ಷಿಸಿದರು. ರಮಾನಂದ ಕುಲಕರ್ಣಿ, ಡಾ. ಶಿವರಾಜ ಕುಲಕರ್ಣಿ, ಪ್ರಶಾಂತ ಗೌಡರ, ಹರ್ಷ ಕುರಣಿ ಇತರರಿದ್ದರು.
Published on

ಬೆಳಗಾವಿ: ಮಹಾರಾಷ್ಟ್ರ ಸರ್ಕಾರ ಜವಳಿ ಉದ್ಯಮಿಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿರುವ ನೀತಿ ಅಧ್ಯಯನ ಮಾಡಿ ವರದಿ ಕೊಡಿ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹುಕ್ಕೇರಿ ತಾಲೂಕಿನ ಬುಗಟಿ ಆಲೂರಿನ ಕುರ್ಣೆ ಟೆಕ್ಸ್‌ಟೈಲ್ ಪಾರ್ಕ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿ, ಪವರ್‌ಲೂಮ್ ಮಾಲೀಕರ ಅಹವಾಲು ಸ್ವೀಕರಿಸಿದರು. ಬಳಿಕ ವಿದ್ಯುತ್ ಬದಲಿಗೆ ಸೋಲಾರ್ ಅಳವಡಿಸಿಕೊಂಡರೆ ಅದರ ಸಾಧಕ-ಬಾಧಕಗಳೇನು ಎಂಬ ಬಗ್ಗೆಯೂ ವರದಿ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜವಳಿ ಉದ್ಯಮ ಅಭಿವೃದ್ಧಿ ಮತ್ತು ನೇಕಾರರ ಹಿತ ಗಮನದಲ್ಲಿರಿಸಿಕೊಂಡು ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ. ಉದ್ಯಮಕ್ಕೆ ಪೂರಕವಾಗಿ ನೀತಿಯಲ್ಲಿ ಸೇರ್ಪಡೆ ಮಾಡಬೇಕಾದ ಅಂಶಗಳ ಬಗ್ಗೆ ಪರಿಣಿತರಿಂದ ಸಲಹೆ ಪಡೆಯಲಾಗುತ್ತಿದೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಉದ್ಯಮ ಬೆಳೆಸಬೇಕಾದರೆ ಮಹಾರಾಷ್ಟ್ರ ಸರ್ಕಾರದ ವಿದ್ಯುತ್ ನೀತಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು. ಬಂಡವಾಳ ಸಬ್ಸಿಡಿಯನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು ಎಂದು ಜವಳಿ ಉದ್ಯಮಿಗಳು ಸಚಿವರಿಗೆ ಮನವಿ ಮಾಡಿದರು. ಅಹವಾಲು ಕೇಳಿದ ಸಚಿವರು, ನಮ್ಮ ಸರ್ಕಾರ ಜವಳಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಹೀಗಾಗಿ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗುತ್ತದೆ. ಪೂರಕವಾಗಿರುವ ಅಂಶಗಳನ್ನು ಪರಿಗಣಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.

ಪಶುಪತಿನಾಥ ಟೆಕ್ಸ್‌ಟೈಲ್ಸ್ ಘಟಕಕ್ಕೆ ಭೇಟಿ ನೀಡಿ ಮಗ್ಗ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಟೆಕ್ಸ್‌ಟೈಲ್ ಅಡ್ವೈಸರ್ ರಮಾನಂದ ಕುಲಕರ್ಣಿ, ಜವಳಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ. ಶಿವರಾಜ ಕುಲಕರ್ಣಿ, ಪ್ರಶಾಂತ ಗೌಡರ, ಹರ್ಷವರ್ಧನ ಕುರಣೆ, ದಯಾನಿಧಿ ಕುರಣೆ, ಅಂಕಿತ ಬಹೆಟಿ, ಕೃಷ್ಣ ಗಿಲಾದ, ಪ್ರಶಾಂತ ಗೌಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net