

ರಬಕವಿ-ಬನಹಟ್ಟಿ: ಕಳೆದ 10 ದಿನಗಳಿಂದ ಸರದಿ ಸತ್ಯಾಗ್ರಹ ನಡೆಸುತ್ತಿರುವ ರಬಕವಿ-ಬನಹಟ್ಟಿ ಕೈಮಗ್ಗ ನೇಕಾರರ ಪ್ರತಿಭಟನಾ ಸ್ಥಳಕ್ಕೆ ಜವಳಿ ಇಲಾಖೆ ಉಪನಿರ್ದೇಶಕ ಬಿ.ಎ. ಫೀರಜಾದೆ ಶುಕ್ರವಾರ ಭೇಟಿ ನೀಡಿದರು.
ನೇಕಾರರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅಧಿಕಾರಿ ಫೀರಜಾದೆ, ತಮ್ಮ ಸಮಸ್ಯೆಗಳು ಕೇಂದ್ರ ಕಚೇರಿ ಆಡಳಿತ ವ್ಯವಸ್ಥಾಪಕರು ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಗಮನದಲ್ಲಿವೆ. ನೇಕಾರರ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡುವ ಮೂಲಕ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನೇಕಾರ ಮುಖಂಡ ಸದಾಶಿವ ಗೋಂದಕರ ಮಾತನಾಡಿ, ನಾಲ್ಕೈದು ದಶಕಗಳಿಂದ ನೇಕಾರಿಕೆ ಹೋರಾಟ ಮಾಡುತ್ತಿರುವ ನೇಕಾರರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಲಗೊಂಡಿದೆ. ನಿವೇಶನ, ಮನೆ ಹಾಗೂ ನಿರಂತರ ಉದ್ಯೋಗ ಸೇರಿ ಕನಿಷ್ಠ ಬೇಡಿಕೆಗಳಿಗೆ ಸರ್ಕಾರದ ಸ್ಪಂದನೆ ಆಗದಿರುವುದು ತೀವ್ರ ಬೇಸರ ತಂದಿದೆ ಎಂದರು.
ಗಡುವು: ಈಗಾಗಲೇ ಸತ್ಯಾಗ್ರಹನಿರತ ನೇಕಾರರು ಮನನೊಂದಿದ್ದಾರೆ. ಡಿ.3ರವರೆಗೆ ಸರ್ಕಾರಕ್ಕೆ ಗಡುವು ನೀಡಲಾಗುವುದು. ಮುಂದಿನ ದಿನಗಳಲ್ಲಿ ನೇಕಾರರ ಹೋರಾಟದ ಸ್ವರೂಪ ಬದಲಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ನಡೆಯಲಿದೆ ಎಂದು ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ತಿಳಿಸಿದರು.
ಶಾಸಕರ ಮನೆ ಮುಂದೆ ಧರಣಿ: ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ನಿವಾಸದೆದುರು ಶೀಘ್ರ ಸತ್ಯಾಗ್ರಹ ನಡೆಸಲು ನೇಕಾರರ ಚಿಂತನೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವದೆಂದು ಟಿರಕಿ ಹೇಳಿದರು.
ಕೆಎಚ್‌ಡಿಸಿ ನಿಗಮದ ಸಹಾಯಕ ಉಪನಿರ್ದೇಶಕ ಎಸ್.ಬಿ. ಕಮಲದಿನ್ನಿ, ಸಿದ್ದು ಖವಲಗಿ, ಯೋಜನಾಧಿಕಾರಿ ವಿಜಯಕುಮಾರ ಚಲವಾದಿ ಇದ್ದರು.
ಸತ್ಯಾಗ್ರಹ ಕೈಬಿಟ್ಟು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳು ನೇಕಾರರಿಗೆ ಮನವಿ ಮಾಡಿದರು. ನೇಕಾರರು ಇದಕ್ಕೆ ಸುತಾರಾಂ ಒಪ್ಪದೆ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸುವ ಮೂಲಕ ಧರಣಿ ಮುಂದುವರಿಸಿದರು.