ಧಾರವಾಡಕ್ಕೆ ವೆದರ್ ಡಾಪ್ಲರ್ ರಾಡಾರ್

Pralhad Joshi 3
Published on

ಹುಬ್ಬಳ್ಳಿ : ಬೆಂಗಳೂರು, ಮಂಗಳೂರು ಮತ್ತು ಧಾರವಾಡದಲ್ಲಿ ಮೂರು ಡಾಪ್ಲರ್ ವೆದರ್ ರಾಡಾರ್​ಗಳನ್ನು ಶೀಘ್ರ ಸ್ಥಾಪಿಸಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

2021ರಲ್ಲೇ ಉತ್ತರ ಕರ್ನಾಟಕದ ಭಾಗಕ್ಕೆ ಎಕ್ಸ್-ಬ್ಯಾಂಡ್ ಡಾಪ್ಲರ್ ರಾಡಾರ್​ನ ತುರ್ತು ಅಗತ್ಯವಿದೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದು, ಸಚಿವರು ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೀಗ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ರಾಡಾರ್ ಸ್ಥಾಪನೆಗೊಳ್ಳುತ್ತಿದ್ದು, ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಜೋಶಿ ಹೇಳಿದ್ದಾರೆ.

ಈ ರಾಡಾರ್ 150 ರಿಂದ 175 ಕಿಮೀಗಳಿಗೂ ಹೆಚ್ಚು ಪ್ರದೇಶದ ನಿಖರವಾದ ವಾತಾವರಣ ಮತ್ತು ವಾತಾವರಣ ಬದಲಾವಣೆ, ಹವಾಮಾನ ವೈಪರಿತ್ಯದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡುತ್ತದೆ. ಮಳೆಯ ಮುನ್ಸೂಚನೆ, ಒಣಹವೆಯ ಮಾಹಿತಿ, ತಾಪಮಾನದ ಏರಿಳಿತ ಸೇರಿದಂತೆ ವಾತಾವರಣದ ಏರುಪೇರುಗಳ ನಿಖರ ಮಾಹಿತಿ ನೀಡಲಿದೆ.

ರೈತರಿಗೆ ಬೆಳೆಹಾನಿ, ಬೆಳೆ ನಷ್ಟದಿಂದ ಪಾರುಮಾಡುವುದರ ಜತೆಗೆ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಸಹಾಯ ಮಾಡುತ್ತದೆ. ಈ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಧಾರವಾಡ ಪ್ರದೇಶದಲ್ಲಿ ನುರಿತ ವೃತ್ತಿಪರರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಬದಲಾಗುತ್ತಿರುವ ಹವಾಮಾನದೊಂದಿಗೆ ರೈತನ ಆದಾಯ ಹೆಚ್ಚಿಸುವುದಲ್ಲದೇ ಉತ್ಪಾದನಾ ವೆಚ್ಚ ಕೂಡ ಕಡಿಮೆ ಮಾಡಬೇಕಿದೆ. ಈ ರಾಡಾರ್ ಅಳವಡಿಕೆಯಿಂದ ಹವಾಮಾನ ವೈಪರೀತ್ಯ ನಿರ್ವಹಣೆೆ ಸಾಧ್ಯವಾಗುವುದು ಎಂದು ಹೇಳಿದ್ದಾರೆ.

ಸಂರಕ್ಷಿತ ರಚನೆಗಳು ವಾತಾವರಣವನ್ನು ಬದಲಾವಣೆ ಮಾಡುವುದಲ್ಲದೆ ಗಾಳಿ, ಮಳೆ ಹಾಗೂ ಕೀಟಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಉತ್ತರ ಕರ್ನಾಟಕ ಕೃಷಿ ಹವಾಮಾನ ಹಾಗು ಸಂಶೋಧನಾಕೇಂದ್ರದಲ್ಲಿ ವೆದರ್ ಡಾಪ್ಲರ್ ರಾಡಾರ್ ಅಳವಡಿಕೆಯಿಂದ ಈ ಭಾಗದ ಲಕ್ಷಾಂತರ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹವಮಾನ ಮನ್ಸೂಚನೆ ಹಾಗೂ ಸಲಹೆಗಳಿಂದ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net