

ವಿಜಯಪುರ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಹೈವೇಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಅಧಿಕವಾಗಿ ವಾಹನ ಸವಾರರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೆ. 5 ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಲು ನಿರ್ಧರಿಸಿದ್ದು, ಸದ್ಯ ಬೈಕ್ ಸವಾರರಿಗೆ ಎಚ್ಚರಿಕೆ ನೀಡುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ ವಿಪರೀತ ಬಿಸಿಲು. ಹೆಲ್ಮೆಟ್ ಧರಿಸಿ ಓಡಾಡುವವರಿಗೆ ಚರ್ಮ ಕಾಯಿಲೆ, ತಲೆಯಲ್ಲಿ ಕೂದಲು ಉದುರುವಿಕೆಯಂತ ಸಮಸ್ಯೆಗಳು ಕಂಡು ಬರುತ್ತಿದ್ದವು.
ಈ ಕಾರಣದಿಂದ ನಿಯಮಾನುಸಾರ ಶಿರಸ್ತ್ರಾಣ ಕಡ್ಡಾಯವಿದ್ದರೂ ವಿನಾಯಿತಿ ನೀಡಿದ್ದರು.
ಆದರೆ ಯುವಕರು ಹೆಲ್ಮೆಟ್ ಇಲ್ಲದೆ ಬೈಕ್‌ಗಳನ್ನು ಹೈವೇಗಳಲ್ಲೂ ಮನಬಂದಂತೆ ಓಡಿಸಿ, ಅಪಘಾತಕ್ಕೀಡಾಗಿ ಹೆಡ್ ಇಜ್ಯೂರಿಯಿಂದಲೇ ಸಾವನ್ನಪ್ಪುತ್ತಿರುವುದನ್ನು ಮನಗಂಡು ಪೊಲೀಸ್ ಇಲಾಖೆ ಈಗ ವಿಜಯಪುರ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ.
ಕಳೆದ ಒಂದು ವರ್ಷದಲ್ಲಿ ನಡೆದ ಅಪಘಾತ- ಸಾವು ಪ್ರಕರಣಗಳಲ್ಲಿ ಶೇ. 90 ರಷ್ಟು ಸಾವು ಹೆಲ್ಮೆಟ್ ಇಲ್ಲದ ಪರಿಣಾಮ ಸಂಭವಿಸಿವೆ.
ಅದ್ರಲ್ಲೂ ಮೊನ್ನೆಯಷ್ಟೆ ಸೊಲ್ಲಾಪುರ ರಸ್ತೆಯಲ್ಲಿ ಹೊನ್ನುಟಗಿ ಗ್ರಾಮದ ನವ ವಿವಾಹಿತ ಜೋಡಿಯೊಂದು ಮೃತಪಟ್ಟಿದೆ. ಅಲ್ಲದೆ ಇದೇ ಹೈವೇ ಬ್ರಿಡ್ಜ್ ನಲ್ಲಿ ಹಂಚನಾಳ ತಾಂಡಾದ ಇಬ್ಬರು ಯುವಕರು ಲಾರಿ ಕೆಳಗೆ ತಲೆ ಸಿಕ್ಕು ಸ್ಥಳದಲ್ಲೆ ಮೃತಪಟ್ಟಿದ್ದರು. ಹೀಗಾಗಿ ಪ್ರಕರಣ ಗಂಭೀರವಾಗಿ ಪರಿಣಿಸಿರುವ ಪೊಲೀಸರು ಹೆಲ್ಮೆಟ್ ಕಡ್ಡಾಯ ಮಾಡ್ತಿದ್ದಾರೆ.
ಇದನ್ನೂ ಓದಿ: ಬರಗಾಲ ಘೋಷಣೆಗೆ ಶಾಸಕರಿಗೆ ಮನವಿ
ಕಳೆದ ಮೂರು ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ಬೈಕ್ ಅಪಘಾತಗಳು ಹಾಗೂ ಮೃತಪಟ್ಟವರ ಅಂಕೆ ಸಂಖ್ಯೆಗಳು ಹೀಗಿದೆ. 2021 ರಲ್ಲಿ 209 ಬೈಕ್ ಅಪಘಾತಗಳು ಸಂಭವಿಸಿದ್ದು ಅದರಲ್ಲಿ 236 ಜನರು ಸಾವನ್ನಪ್ಪಿದ್ದಾರೆ.
2022ರಲ್ಲಿ 234 ಬೈಕ್ ಅಪಘಾತಗಳು ಸಂಭವಿಸಿದ್ದು ಇದರಲ್ಲಿ 251 ಜನ ಸಾವನ್ನಪ್ಪಿದ್ದಾರೆ. ಪ್ರಸ್ತುತ ವರ್ಷ 2023 ರಲ್ಲಿ ಇದುವರೆಗೂ 132 ಬೈಕ್ ಅಪಘಾತಗಳು ಸಂಭವಿಸಿದ್ದು ಇಲ್ಲಿಯ ವರೆಗೆ 135 ಜನ ಸಾವನ್ನಪ್ಪಿದ್ದಾರೆ.
ಹೀಗೆ ಬೈಕ್ ಅಪಘಾತಗಳಲ್ಲಿ ತಲೆಗೆ ಗಾಯ ಆಗಿ ಮೃತಪಟ್ಟವರೇ ಹೆಚ್ಚಾಗಿರುವುದರಿಂದ ಹೆಲ್ಮೆಟ್ ರೂಲ್ಸ್ ಕಡ್ಡಾಯ ಮಾಡಲಾಗಿದೆ.
ಒಟ್ಟಿನಲ್ಲಿ ಅತಿ ಬಿಸಿಲು- ಚರ್ಮರೋಗಗಳ ನೆಪ ಮಾಡಿ ಹೆಲ್ಮೆಟ್ ಇಲ್ಲದೆ ಓಡಾಡ್ತಿದ್ದವರಿಗೆ ಈಗ ಪೊಲೀಸ್ ಇಲಾಖೆ ಫೈನಲ್ ವಾರ್ನಿಂಗ್ ನೀಡಿದೆ. ಹೆಲ್ಮೆಟ್ ಇಲ್ಲದೆ ರಸ್ತೆಗಿಳಿದರೆ ಕಠಿಣ ಕ್ರಮದ ಜೊತೆಗೆ, ಸಾವಿರಾರು ರೂಪಾಯಿ ದಂಡ ಫಿಕ್ಸ್ ಎನ್ನಲಾಗಿದೆ.