ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸಿ

6
Published on

ಮೈಸೂರು: ಬೈಕ್ ಸವಾರರು ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸಿ ಸಂಚಾರ ನಿಯಮ ಪಾಲಿಸಬೇಕು ಎಂದು ಡಿಸಿಪಿ ಮುತ್ತುರಾಜ್ ಹೇಳಿದರು.
ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ರೆಡ್ ಎಫ್‌ಎಂ 93.5 ರೇಡಿಯೋ ಚಾನಲ್ ವತಿಯಿಂದ ಆಯೋಜಿಸಿರುವ ‘ಗಣೇಶ ಬಂದ ಹೆಲ್ಮೆಟ್ ತಂದ’ ಜಾಗೃತಿ ಅಭಿಯಾನಕ್ಕೆ ಸೋಮವಾರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.

ಅಪಘಾತ ಸಂದರ್ಭದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸಹಜ ಸಾವಿಗಿಂತ ಅಪಘಾತದಲ್ಲಿ ಮೃತರಾಗುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇದನ್ನು ತಡೆಯಲು ಪ್ರತಿಯೊಬ್ಬ ಸವಾರರೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.

ಹಿಂಬದಿಯ ಸವಾರರಿಗೂ ಹಾಕಿಸಿ:
ಕೆಲವರು ಕೈ ಯಲ್ಲಿ ಹೆಲ್ಮೆಟ್ ಇಟ್ಟುಕೊಂಡು ವಾಹನ ಓಡಿಸುತ್ತಾರೆ. ಇದು ಸಲ್ಲದು. ಸುರಕ್ಷತೆ ದೃಷ್ಟಿಯಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಹಾಕಿಸಿ ಎಂದು ಅವರು ಸಲಹೆ ನೀಡಿದರು.

ಗಣೇಶ ಪೂಜೆಗೆ ಸಾಮಗ್ರಿ ಕೊಳ್ಳುವುದರ ಜತೆಗೆ ಹೆಲ್ಮೆಟ್ ಖರೀದಿಗೂ ಮುಂದಾಗಿ. ಈ ಬಗ್ಗೆ ಅಕ್ಕ ಪಕ್ಕದ ಮನೆಯವರಿಗೂ ಜಾಗೃತಿ ಮೂಡಿಸಿ. ಎಲ್ಲರ ಜೀವ ಉಳಿಸಿ ಎಂದು ಡಿಸಿಪಿ ಮುತ್ತುರಾಜ್ ಹೇಳಿದರು.
ರೆಡ್ ಎಫ್‌ಎಂ 93.5 ಹೆಲ್ಮೆಟ್ ಜಾಗೃತಿ ಮೂಡಿಸುತ್ತಿರುವುದು ಮಾದರಿ ಕಾರ್ಯ. ‘ಗಣೇಶ ಬಂದ ಹೆಲ್ಮೆಟ್ ತಂದ’ ಎಂದು ಜಾನಪದ ಶೈಲಿಯಲ್ಲಿ, ಜನರಿಗೆ ಹತ್ತಿರವಾದ ಭಾಷೆಯಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ನಾವೂ ಕೈ ಜೋಡಿಸುತ್ತೇವೆ ಎಂದರು.

ಎಐ ಕ್ಯಾಮರಾ ಅಳವಡಿಕೆ :
ಡಿಸಿಪಿ ಜಾಹ್ನವಿ ಮಾತನಾಡಿ, ನಗರದಲ್ಲಿ ಸದ್ಯ ಎಲ್ಲರ ತಲೆ ಮೇಲೆ ಹೆಲ್ಮೆಟ್ ಇದೆ. ಇಂದು ನಗರದಾದ್ಯಂತ ಎಐ ಕ್ಯಾಮರಾಗಳನ್ನು ಇಲಾಖೆ ಹೆಚ್ಚಾಗಿ ಅಳವಡಿಸುತ್ತಿದೆ. ದಂಡದಿಂದ ತಪ್ಪಿಸುಕೊಳ್ಳಲು ಕೆಲವರು ಹೆಲ್ಮೆಟ್ ಧರಿಸುತ್ತಿದ್ದಾರೆ. ಕಾನೂನು ಪಾಲನೆಯೊಂದಿಗೆ ನಮ್ಮ ಜೀವ ರಕ್ಷಣೆಗೂ ಮಹತ್ವ ನೀಡಬೇಕು ಎಂದರು.

ಎಸಿಪಿ ಪರಶುರಾಮಪ್ಪ ಮಾತನಾಡಿ, ನಗರದಲ್ಲಿ ಅಪಘಾತಗಳು ಹೆಚ್ಚಾಗಿವೆ. ಕಳೆದ 8 ತಿಂಗಳಲ್ಲಿ 120 ಜನ ಮೃತರಾಗಿದ್ದಾರೆ. ಇವರೆಲ್ಲಾ ಹೆಲ್ಮೆಟ್ ಧರಿಸದವರು. ಪ್ರತಿ ತಿಂಗಳಿಗೆ 15 ಜನ ಅಪಘಾತದಿಂದ ಸಾಯುತ್ತಿದ್ದಾರೆ. ವಾಹನ ಸವಾರರು ಹೆಲ್ಮೆಟ್‌ಗೆ ಆದ್ಯತೆ ನೀಡಬೇಕು ಎಂದರು.

ವಿಜಯವಾಣಿ ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮಾತನಾಡಿ, ರೆಡ್ ಎಫ್‌ಎಂ 93.5 ರೇಡಿಯೋ ಚಾನಲ್ ಇಂದು ಉತ್ತಮವಾದ ಕಾರ್ಯಕ್ರಮ ಆಯೋಜಿಸಿದೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮ ಪಾತ್ರವೂ ದೊಡ್ಡದು. ರೆಡ್ ಎಫ್‌ಎಂ ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ. ವಿಜಯವಾಣಿಯೂ ಸಮಾಜಮುಖಿ ಕೆಲಸಗಳಲ್ಲಿ ಎಂದೂ ಮುಂದಿದೆ ಎಂದರು.
ವಿಜಯವಾಣಿ ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ದೀಪಕ್ ಘಾಟ್ಕೆ, ಅಪೋಲೋ ಆಸ್ಪತ್ರೆಯ ಭರತೇಶ್ ರೆಡ್ಡಿ, ಡಾ.ಶಿವಕುಮಾರ್, ಶಾಂತಮಲ್ಲಪ್ಪ, ಆರ್‌ಜೆ ಪುನೀತ್, ಚೇತನ್ ಕುಮಾರ್, ಬಾಲಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net