ಬೆಟ್ಟದಪುರದ ಧರ್ಮಸ್ಥಳ ಕಚೇರಿಯಲ್ಲಿ ಆಯುಧ ಪೂಜೆ

25BTP02
Published on

 ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಕಚೇರಿಯಲ್ಲಿ ಗುರುವಾರ ಆಯುಧ ಮತ್ತು ಕಚೇರಿ ಪೂಜೆ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಹಾಗೂ ಬಣ್ಣ ಬಣ್ಣದ ರಂಗೋಲಿಯಿಂದ ಕಚೇರಿಯನ್ನು ಅಲಂಕಾರಗೊಳಿಸಲಾಗಿತ್ತು. ಶ್ರೀಲಕ್ಷ್ಮೀದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ದೇವಿಗೆ ಹಾಗೂ ಕಚೇರಿ ಸಿಬ್ಬಂದಿ ವಾಹನಗಳಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ನವರಾತ್ರಿ ವೇಳೆ ಶಕ್ತಿ ದೇವತೆಗಳ ಆರಾಧನೆ ಮಾಡಿ ಒಂಬತ್ತು ದಿನಗಳ ಕಾಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ದೇವತೆಗಳ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಕರುನಾಡು ಸಂಪದ್ಭರಿತವಾಗಿರಲಿ ಎಂದು ಆಶಿಸಿದರು.

ವಲಯ ಯೋಜನಾಧಿಕಾರಿ ಸಂತೋಷ್ ಕುಮಾರ್ ಜೈನ್ ಮಾತನಾಡಿ, ಎಲ್ಲರೂ ಒಟ್ಟಾಗಿ ಒಂದೆಡೆ ಸೇರಿ ಹಬ್ಬ ಆಚರಿಸುವುದರಿಂದ ನಮ್ಮಲ್ಲಿ ಭಾವೈಕ್ಯತೆ ಮೂಡಿ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಜಾಗೃತಿ ಹೆಚ್ಚಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಕಚೇರಿಯಲ್ಲಿ ಆಯುಧ ಪೂಜೆ ಮತ್ತು ಕಚೇರಿ ಮಹೋತ್ಸವ ಆಚರಣೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.

ಪೂಜೆ ಮಹೋತ್ಸವ ಹಿನ್ನೆಲೆ ಮಹಿಳಾ ಹಾಗೂ ಪುರುಷ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಟ್ಟು, ಧರ್ಮ ಮತ್ತು ಸಂಸ್ಕೃತಿಯ ಬಿಂಬಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಉಪಾಧ್ಯಕ್ಷ ಬಿ.ಜೆ ದೇವರಾಜ್, ಸದಸ್ಯರಾದ ಅಶೋಕ್, ಮಲ್ಲೇಶ್, ಮಹದೇವ್.ಕೆ, ಚಂದ್ರಶೇಖರ್, ಹಣಕಾಸು ಪ್ರಬಂಧಕ ಅಭಿಲಾಶ್, ಆಡಳಿತ ಸಹಾಯಕ ಪ್ರಬಂಧಕರು ಮಾನಸ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮತಾ, ಕೃಷಿ ಮೇಲ್ವಿಚಾರಕ ವಿನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net