

ಮೈಸೂರು: ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ದುರ್ಬಲಗೊಂಡಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ 2.7 ಮಿ.ಮೀ. ಮಳೆಯಾಗಿದ್ದು, ಶೇ.36 ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ಜಲಾಶಯಗಳ ಒಳ ಹಾಗೂ ಹೊರ ಹರಿವಿನ ಪ್ರಮಾಣ ಸಹ ಕುಸಿತ ಕಂಡಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ಎಚ್.ಡಿ. ಕೋಟೆ ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು, ಉಳಿದೆಲ್ಲ ತಾಲೂಕುಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ 3.5 ಮಿ.ಮೀ. (ವಾಡಿಕೆ ಮಳೆ 2.9 ಮಿ.ಮೀ.), ಹುಣಸೂರು ತಾಲೂಕಿನಲ್ಲಿ 1.1 ಮಿ.ಮೀ. (2.1), ಸಾಲಿಗ್ರಾಮ ತಾಲೂಕಿನಲ್ಲಿ 0.3 (1.1 ಮಿ.ಮೀ.), ಮೈಸೂರು ತಾಲೂಕಿನಲ್ಲಿ 0.6 ಮಿ.ಮೀ. (2.0 ಮಿ.ಮೀ), ನಂಜನಗೂಡು ತಾಲೂಕಿನಲ್ಲಿ 1.3 ಮಿ.ಮೀ. (2.1 ಮಿ.ಮೀ.), ಪಿರಿಯಾಪಟ್ಟಣ ತಾಲೂಕಿನಲ್ಲಿ 4.8 ಮಿ.ಮೀ. (3.2 ಮಿ.ಮೀ.), ತಿ.ನರಸೀಪುರ ತಾಲೂಕಿನಲ್ಲಿ 1.1 ಮಿ.ಮೀ. (1.5 ಮಿ.ಮೀ.), ಸರಗೂರು ತಾಲೂಕಿನಲ್ಲಿ 2.7 ಮಿ.ಮೀ. (4.2 ಮಿ.ಮೀ.) ಮಳೆಯಾಗಿದೆ. ಕೆ.ಆರ್.ನಗರ ತಾಲೂಕಿನಲ್ಲಿ 24 ಗಂಟೆಯ ಅವಧಿಯಲ್ಲಿ ಮಳೆ ಸುರಿದಿಲ್ಲ, 2.2 ಮಿ.ಮೀ. ವಾಡಿಕೆ ಮಳೆ ಆಗಬೇಕಾಗಿತ್ತು.
ಮಳೆಯ ಕೊರತೆಯಿಂದ ಜಿಲ್ಲೆಯ ಕಬಿನಿ, ತಾರಕ ಮತ್ತು ನುಗು ಜಲಾಶಯದ ಒಳ ಹರಿವಿನ ಪ್ರಮಾಣ ಕೂಡ ಕುಸಿತ ಕಂಡಿದೆ. ಕಳೆದವಾರ ಕೇರಳದ ವಯನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತಿತ್ತು. ಆದರೆ, ಇದೀಗ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ 4373 ಕ್ಯೂಸೆಕ್‌ಗೆ ಕುಸಿತ ಕಂಡಿದ್ದು, ಜಲಾಶಯದಿಂದ 3,500 ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ. ಗರಿಷ್ಠ 2284 ಅಡಿಗಳಷ್ಟು (ಸಮುದ್ರಮಟ್ಟ) ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2283.40 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
ನುಗು ಜಲಾಶಯಕ್ಕೆ 342 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು ಇಲ್ಲ. 110 ಅಡಿಗಳಷ್ಟು (ನೆಲಮಟ್ಟ) ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 106.7 ಅಡಿಗಳಷ್ಟು ನೀರು ಇದೆ. ತಾರಕ ಜಲಾಶಯಕ್ಕೆ 43 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. 2,425 ಅಡಿಗಳಷ್ಟು (ಸಮುದ್ರಮಟ್ಟ) ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2413.58 ಅಡಿಗಳಷ್ಟು ನೀರು ಸಂಗ್ರಹವಾಗಿದೆ.