ನಾವು ಮನೆ ಬಿಟ್ಟು ಹೋಗಲ್ಲ

Kavital protest
ಕೊಟೆಕಲ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಪಂ ಸದಸ್ಯ ಬಸವರಾಜ, ಪ್ರಮುಖರಾದ ದುರುಗಮ್ಮ, ಹನುಮಂತಿ, ಹುಸೇನಮ್ಮ, ಅಯ್ಯಮ್ಮ, ಅಂಬಮ್ಮ, ಮುದುಕಪ್ಪ, ಹುಚ್ಚಬುಡ್ಡ, ಹುಚ್ಚಪ್ಪ ಕುರ್ಲಿ, ವೆಂಕಟೇಶ ಇತರರಿದ್ದರು.
Published on

ಕವಿತಾಳ: ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಳ್ಳಲಾಗಿದೆ ಎಂಬ ವಿಚಾರಕ್ಕೆ ಅಮೀನಗಡ ಗ್ರಾಪಂ ವ್ಯಾಪ್ತಿಯ ಕೊಟೆಕಲ್‌ನಲ್ಲಿ ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆಯಿತು.

ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಬುನಾದಿ ಅಗೆಯುತ್ತಿರುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಇಲಾಖೆಗೆ ಸೇರಿದ ಭೂಮಿಯಾಗಿದ್ದು, ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಗ್ರಾಮದ ಬಹುತೇಕರು ಅರಣ್ಯ ಭೂಮಿಯಲ್ಲಿ ಮನೆಗಳನ್ನು ಕಟ್ಟಿಸಿಕೊಂಡಿದ್ದು, ಮನೆ ನಿರ್ಮಾಣಕ್ಕೆ ಅಡ್ಡಿಪಡಿಸದಂತೆ ವ್ಯಕ್ತಿ ಮನವಿ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ-ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಬಸವರಾಜ ನಾಯಕ ಮಾತನಾಡಿ, ಊರಿನ ಜನರು ಅರಣ್ಯ ಇಲಾಖೆ ಮೇಲಧಿಕಾರಿಗಳ ಅನುಮತಿ ಪಡೆದು ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಮುನ್ಸೂಚನೆ ನೀಡದೆ ಏಕಾಏಕಿ ಬಂದು ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಇಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ಊರಿನ ನಾಗಮ್ಮ ತಳವಾರ ಮಾತನಾಡಿ, ನಮ್ಮ ತಾತ-ಮುತ್ತಾತನ ಕಾಲದಲ್ಲಿ ಮನೆಗಳನ್ನು ಕಟ್ಟಿದ್ದು, ಈಗ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಅರಣ್ಯ ಭೂಮಿ ಎಂದು ಕಿರುಕುಳ ನೀಡುತ್ತಿರುವುದು ಸರಿಯಲ್ಲ. ನಾವು ನಮ್ಮ ಮನೆ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಗ್ರಾಮದ ಮಹಿಳೆಯರು ಧ್ವನಿಗೂಡಿಸಿ ಸಿಬ್ಬಂದಿ ವಿರುದ್ಧ ಹರಿಹಾಯ್ದರು.

ಸ್ಥಳಕ್ಕೆ ಆಗಮಿಸಿದ ಕವಿತಾಳ ವಲಯ ಅರಣ್ಯಧಿಕಾರಿ ನೀಲಕಂಠ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಿ, ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಯಾವುದೇ ಗೊಂದಲ, ಗಲಾಟೆಗೆ ಅವಕಾಶ ನೀಡದೆ ಹೋರಾಟ ಕೈಬಿಡಬೇಕು ಎಂದು ಕೋರಿದರು. ಪ್ರಮುಖರಾದ ಹುಚ್ಚಬುಡ್ಡ, ದೇವೇಂದ್ರಪ್ಪ, ಹುಚ್ಚಪ್ಪ ಗುಂತಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net