

ಹುಬ್ಬಳ್ಳಿ: ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದ್ದು, ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ನ ತತ್ವ-ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಪಕ್ಷಕ್ಕೆ ಸೇರ್ಪಡೆಯಾಗಬಹುದು. ನಾವಾಗಿಯೇ ಸೇರಿಸಿಕೊಳ್ಳಲು ಆರಂಭಿಸಿದರೆ ಬಿಜೆಪಿ-ಜೆಡಿಎಸ್ನಲ್ಲಿ ಯಾರೂ ಉಳಿಯುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಬಿಜೆಪಿಗೆ ನಡುಕ ಶುರು ಆಗಿದೆ. ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಅವರಿಗೆ ಹಿನ್ನಡೆಯಾಗುವುದು ಗ್ಯಾರಂಟಿ. ಹಾಗಾಗಿ, ಅವರು ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಧಾರವಾಡದಲ್ಲಿ ಇಂದು ಸಭೆ:
ನವೆಂಬರ್ 1ರಿಂದ ವರ್ಷವಿಡೀ ಆಚರಿಸಲಿರುವ ‘ಸಂಭ್ರಮ ಕರ್ನಾಟಕ’ ಕಾರ್ಯಕ್ರಮದ ಬೆಳಗಾವಿ ವಿಭಾಗ ಮಟ್ಟದ ಪೂರ್ವಭಾವಿ ಸಭೆಯನ್ನು ಧಾರವಾಡದಲ್ಲಿ ಆ. 22ರಂದು ಕರೆದಿದ್ದೇವೆ. 300ಕ್ಕೂ ಹೆಚ್ಚು ಸಾಹಿತಿಗಳು, ಕನ್ನಡಾಭಿಮಾನಿಗಳು, ಸಂಘ-ಸಂಸ್ಥೆಗಳು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರು ವಿಭಾಗ ಮಟ್ಟದ ಸಭೆ ನಡೆದಿದೆ. ಆ. 28ರಂದು ಕಲಬುರ್ಗಿ ಹಾಗೂ ಸೆಪ್ಟೆಂಬರ್ 4ರಂದು ಮೈಸೂರು ವಿಭಾಗ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಎಂಬ ಘೊಷ ವಾಕ್ಯದೊಂದಿಗೆ ಈ ವರ್ಷ ನವೆಂಬರ್ 1ರಿಂದ ಒಂದು ವರ್ಷ ಕಾಲ ಸಂಭ್ರಮ ಕರ್ನಾಟಕ ಕಾರ್ಯಕ್ರಮ ಆಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಎಸ್.ಆರ್. ಪಾಟೀಲ, ದೀಪಾ ಗೌರಿ, ಆನಂದ ಮುರಗೋಡ, ಇತರರು ಇದ್ದರು.