

ಕಲಾದಗಿ: ‘‘ಪ್ರತಿವರ್ಷ ನೀರು ಬಂದಾಗೆಲ್ಲಾ ಎಲ್ಲಾರು ಬರತೀರಿ, ನೋಡತಿರಿ, ಸಾಲಿಗೆ ಹೋಗ್ರೀ, ವ್ಯವಸ್ಥಾ ಮಾಡತೀವಿ ಅಂತೀರಿ. ಹೊಸಾ ಊರಿಗ ನಿಮ್ಮನ್ನೆಲ್ಲ ಇಷ್ಟರಾಗ ಸ್ಥಳಾಂತರ ಮಾಡತೀವಿ ಅಂತ ಭರವಸಾ ನೀಡ್ತೀರಿ…ಆದ್ರ ಆಮ್ಯಾಲೆ ನೀರ ಇಳದ ಮ್ಯಾಲೆ ನಾವು ಇದ್ದಲ್ಲೆ ಇರತೀವಿ, ಸಮಸ್ಯೆ ಮಾತ್ರ ಬಗಿಹರಿಯುವುದಿಲ್ಲ. ನಮಗಿನ್ನೂ ಪರಿಹಾರಾನೂ ಕೊಟ್ಟಿಲ್ಲ, ಹಕ್ಕುಪತ್ರಾನೂ ಇಲ್ಲ….’’
ಗ್ರಾಮದ ಸದರ್ ಬಜಾರ್‌ನ ಕೆಳಭಾಗದಲ್ಲಿ ಸೋಮವಾರ ಸಂಜೆ ಘಟಪ್ರಭೆ ಪ್ರವಾಹ ಪರಿಸ್ಥಿತಿಯನ್ನು ನೋಡಲ್ ಅಧಿಕಾರಿ ಮಂಜುನಾಥ ಸೇರಿ ಹಲವು ಅಧಿಕಾರಿಗಳ ತಂಡ ಅವಲೋಕಿಸುತ್ತಿರುವ ಸಂದರ್ಭದಲ್ಲಿ ಅಲ್ಲಿನ ಸಂತ್ರಸ್ತ ಯಲ್ಲಪ್ಪ ಮಾದರ ತೋಡಿಕೊಂಡ ಅಳಲಿದು.
ಇದು ಅಲ್ಲಿದ್ದ ಯಲ್ಲಪ್ಪ ಅವರೊಬ್ಬರ ಅಳಲಲ್ಲ. ಏರುತ್ತಿರುವ ನೀರಿನಿಂದ ಅಲ್ಪದೂರದಲ್ಲಿರುವ ಅಲ್ಲಿನ ಐದಾರು ಮನೆ ಸಂತ್ರಸ್ತರ ಮಾತು ಕೂಡ ಇದಾಗಿತ್ತು.
ಸೋಮವಾರ ಬೆಳಗ್ಗೆಯಿಂದ ಅಂದಾಜು ಮೂರ‌್ನಾಲ್ಕು ಅಡಿ ಏರಿರುವ ಘಟಪ್ರಭೆ ಪ್ರವಾಹದ ಪರಿಸ್ಥಿಯನ್ನು ಅವಲೋಕಿಸಿದ ನೋಡಲ್ ಅಧಿಕಾರಿ ಮಂಜುನಾಥ, ಉಪತಹಸೀಲ್ದಾರ್ ಆರ್.ಆರ್.ಕುಲಕರ್ಣಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಪಂ ಕಾರ್ಯದರ್ಶಿ ಎಸ್.ಎಸ್.ಪರಸಣ್ಣವರ ಸಂತ್ರಸ್ತರಿಗೆ ಸಮಾಧಾನ ಹೇಳಿದರು. ಕೂಡಲೇ ಮೀನುಗಾರ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಲು ಮನವಿ ಮಾಡಿಕೊಂಡರು.
ಘಟಪ್ರಭೆ ಪದಾರ್ಪಣೆ: ಭಾನುವಾರ ಊರುಗಳ ಮನೆಯಿಂದ ತುಸು ದೂರವೇ ಇದ್ದ ಘಟಪ್ರಭೆ ಸೋಮವಾರ ಸಂಜೆ ಹೊತ್ತಿಗೆ ಹಳ್ಳದ ಮೂಲಕ ಸುತ್ತುವರಿದು ಬಂದು ಪಂಚಾಯಿತಿ ಹಿಂಭಾಗ ಪ್ರದೇಶದ ಮನೆಗಳ ಸಮೀಪ ಧಾವಿಸಿರುವುದು ಆ ಪ್ರದೇಶದ ಸಂತ್ರಸ್ತರ ಆತಂಕಕ್ಕೆ ಕಾರಣವಾಗಿದೆ.