

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗಾಗಿ ಹೋರಾಟ ನಡೆಸಿಕೊಂಡು ಬಂದಿರುವ ರೈತ, ಕಾರ್ವಿುಕ, ದಲಿತ ಹಾಗೂ ಇತರ ಸಂಘಟನೆಗಳು ಒಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಆಚರಣೆ ಮುಗಿದ ಬಳಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಂಘಟನೆಗಳ ಸಭೆ ಕರೆಯಲಾಗುವುದು. ಜನಪ್ರತಿನಿಧಿಗಳನ್ನು ಚರ್ಚೆಗೆ ಆಹ್ವಾನಿಸುವ ಬಗ್ಗೆ ದಿನಾಂಕ ನಿಗದಿಪಡಿಸಲಾಗುವುದು. ಈ ಚರ್ಚೆ ಹುಬ್ಬಳ್ಳಿಯಲ್ಲೇ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಂಸದ ಜಗದೀಶ ಶೆಟ್ಟರ್, ಯೋಜನಾ ವ್ಯಾಪ್ತಿಯ 14 ತಾಲೂಕುಗಳ ಶಾಸಕರನ್ನು ಚರ್ಚೆಗೆ ಆಹ್ವಾನಿಸಲಿದ್ದೇವೆ. ಯಾರು ಚರ್ಚೆಗೆ ಗೈರಾಗುತ್ತಾರೋ ಅವರ ಮನೆ ಮುಂದೆ ಅಥವಾ ಅವರು ಹುಬ್ಬಳ್ಳಿಗೆ ಬಂದಾಗ ಪ್ರತಿಭಟನೆ ನಡೆಸಲಿದ್ದೇವೆ ಎಂದರು.