

ವಿಜಯವಾಣಿ ಸುದ್ದಿಜಾಲ ಉಡುಪಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮುಸುಕುಧಾರಿ (ಮಾಸ್ಕ್ ಮ್ಯಾನ್)ಯ ಬಂಧನ ಮಾಡಿರುವುದು ನಿಜ. ಆತನೀಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ಎಸ್ಐಟಿ ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ, ಆತನ ಹಿಂದೆ ಯಾವ ಜಾಲ ಇದೆ ಎನ್ನುವುದನ್ನು ಪತ್ತೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಉಡುಪಿಯಲ್ಲಿ ಆಗಸ್ಟ್ 23ರಂದು ಮಾಧ್ಯಮದವರೊಂದಿಗೆ ಮಾತನಾಡಿ, ನೂರಾರು ಶವ ಹೂತಿದ್ದಾಗಿ ಮುಸುಕುಧಾರಿ ಹೇಳಿದ್ದರಿಂದ ಎಸ್ಐಟಿ ರಚಿಸಿ ತನಿಖೆ ಕಾರ್ಯ ಮಾಡಿದ್ದೆವು. ಆತ ಸೂಚಿಸಿದ ಸ್ಥಳಗಳಲ್ಲಿ ಅಗೆದು ಶವ ಇದೆಯೇ ಎಂದು ಎಸ್ಐಟಿ ಪರಿಶೀಲಿಸಿದೆ. ಇದೀಗ ಮಾಸ್ಕ್ಮ್ಯಾನ್ನನ್ನು ಎಸ್ಐಟಿ ಬಂಧಿಸಿದ್ದು, ತನಿಖೆ ಮುಂದುವರಿಸಲಿದ್ದಾರೆ ಎಂದರು.
ಮಾಸ್ಕ್ಮ್ಯಾನ್ಗೆ ಮಂಪರು ಪರೀಕ್ಷೆ ಮಾಡಲಾಗುತ್ತದೆಯೆ ಎಂಬ ಪ್ರಶ್ನೆಗೆ ಉತ್ತರಿಸಿ, ಎಸ್ಐಟಿಯಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ. ತನಿಖೆ ಪೂರ್ಣವಾಗುವ ಮೊದಲೇ ಆ ಕುರಿತು ನಾನು ಮಾಹಿತಿ ನೀಡಿದರೆ ಮುಂದಿನ ತನಿಖೆಗೆ ತೊಡಕಾಗಬಹುದು. ಸುಜಾತಾ ಭಟ್ ಹೇಳಿಕೆ ವಿಚಾರವೂ ಸಹ ತನಿಖೆಯಲ್ಲಿದೆ. ಬಿಜೆಪಿಯವರ ಹೇಳಿಕೆ ಆಧಾರದಲ್ಲಿ ತನಿಖೆ ಮಾಡಲು ಆಗುವುದಿಲ್ಲ. ಅವರು ಆರೋಪ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ ಎಂದು ಪ್ರತಿಕ್ರಿಯಿಸಿದರು.
ಕೋಮು ದ್ವೇಷ ಹಾಗೂ ಅವಹೇಳನಕಾರಿ ಮಾತಿನ ಹಿನ್ನಲೆಯಲ್ಲಿ ಮಹೇಶ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲಾಗಿದೆ. ಆದರೆ, ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಅವರೂ ಸಹ ಸಿಎಂ ವಿರುದ್ಧ ಅವಹೇಳನಕಾರಿ ಹಾಗೂ ಕೋಮು ಭಾವ ಕೆರಳಿಸುವ ಭಾಷಣ ಮಾಡಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ, ಪೂಂಜಾ ಅವರು 2023ರಲ್ಲಿ ನೀಡಿದ ಹೇಳಿಕೆಯಾಗಿದೆ. ಆ ವಿಷಯದಲ್ಲಿ ಅವರು ನ್ಯಾಯಾಲಯದಲ್ಲಿ ಬಂಧನ ಮಾಡದಂತೆ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಆ ತಡೆಯಾಜ್ಞೆ ತೆರವಾದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬಹುದು ಎಂದರು.