

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹತ್ಯೆಯಾದ ಯುವತಿ ಅಂಜಲಿ ಅಂಬಿಗೇರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಭೇಟಿ ನೀಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಬೀದರ ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಾಮದಾರ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಅಂಜಲಿ ಹತ್ಯೆಯಾಗಿ 15 ದಿನಗಳು ಕಳೆದರೂ ಅಹಿಂದ ನಾಯಕ ಎಂದು ಕರೆಯಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿಲ್ಲ ಎಂದು ಹೇಳಿದರು.
ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಸರ್ಕಾರ ಕೂಡಲೇ ನ್ಯಾಯ ಒದಗಿಸಬೇಕು. 1 ಕೋಟಿ ರೂ. ಪರಿಹಾರ ನೀಡಬೇಕು. ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಭವಿಷ್ಯದಲ್ಲಿ ಇಂತಹ ಅಪರಾಧಗಳನ್ನು ತಡೆಗಟ್ಟಲು ರಾಜ್ಯದಲ್ಲೂ ಉತ್ತರ ಪ್ರದೇಶ ಮಾದರಿ ಕಾನೂನು ಜಾರಿಗೊಳಿಸಬೇಕು. ಅಂಜಲಿ ಕುಟುಂಬಕ್ಕೆ ಸ್ವಂತ ಮನೆ ಇಲ್ಲ. ಸರ್ಕಾರದಿಂದ ಮನೆ ಕೊಡಿಸಬೇಕು ಹಾಗೂ ಅಂಜಲಿ ಸಹೋದರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.
ಅಂಜಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯಿಂದ ಸೂಕ್ತ ನ್ಯಾಯ ಸಿಗದಿದ್ದರೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುವುದು. ಬೀದರನ ಕೋಲಿ ಸಮುದಾಯದ ನಿಯೋಗವು ಸೋಮವಾರ ಮೃತ ಅಂಜಲಿ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, 51,000 ರೂ.ಗಳ ಆರ್ಥಿಕ ನೆರವು ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಹಾಪುರದ ವೇದವ್ಯಾಸ ಪೀಠದ ರಾಜು ಗುರುಸ್ವಾಮಿ, ಅಪ್ಪಾರಾವ್ ಬೆಳ್ಳಳ್ಳಿಕರ, ಶಿವರಾಜ ಜಹಗೀರದಾರ, ಬಸವರಾಜ ಗುರೂಜಿ, ಇತರರು ಇದ್ದರು.