ನೀರಿಗಾಗಿ ಪ್ರಾಣ ಬೇಕಾದ್ರೂ ಕೋಡ್ತೀವಿ...

FotoJet
Published on

ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿಕೆ | ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ

 ಮಾಗಡಿ/ ಕುದೂರು: ಹೇಮಾವತಿ ನೀರಿಗಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ನೇತೃತ್ವದಲ್ಲಿ ಗುರುವಾರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರೈತ ಸಂಘಟನೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಸೇರಿ ಹೋಬಳಿಯ ಮರೂರು ಹ್ಯಾಂಡ್ ಪೋಸ್ಟ್ ಬಳಿ ತುಮಕೂರು ಜನಪ್ರತಿನಿಧಿಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ತಡೆದು ‘ನಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡಿ’ ಎಂದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕುದೂರು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಮರೂರು ಹ್ಯಾಂಡ್ ಪೋಸ್ಟ್‌ನ ಮಂಗಳೂರು -ಬೆಂಗಳೂರು ರಸ್ತೆಯನ್ನು ತಡೆದು ಮಾನವ ಸರಪಳಿ ರಚಿಸಿ ರಸ್ತೆ ಬಂದ್ ಮಾಡಲು ಮುಂದಾದ ವೇಳೆ ಎಚ್ಚೆತ್ತ ಪೊಲೀಸರು ತಾಳೇಕೆರೆ ಹ್ಯಾಂಡ್ ಪೋಸ್ಟ್ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಪಾದಯಾತ್ರೆ ಮೂಲಕ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿಯೂ ರಸ್ತೆ ತಡೆ ನಡೆಸಲು ಮುಂದಾದ ವೇಳೆ ಡಿವೈಎಸ್‌ಪಿ ಪ್ರವೀಣ್ ಹೋರಾಟಗಾರರನ್ನು ತಡೆಯಲು ಮುಂದಾದರು. ಆಗ ಶಾಸಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪಾದಯಾತ್ರೆ ಎರಡು ಕಿಮೀ ಮುಂದುವರಿಯಿತು. ಸೂರಪ್ಪನಹಳ್ಳಿ ಬಳಿ ಪ್ರತಿಭಟನಾನಿರತರನ್ನು ಅಡ್ಡಗಟ್ಟಿದ ಪೊಲೀಸರು ಶಾಸಕ ಬಾಲಕೃಷ್ಣ, ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್.ಅಶೋಕ್, ತಾಲೂಕು ರೈತಸಂಘದ ಅಧ್ಯಕ್ಷ ಲೋಕೇಶ್, ಜಿಲ್ಲಾಧ್ಯಕ್ಷ ಬೈರೇಗೌಡ, ಪುರಸಭಾ ಸದಸ್ಯ ರಾಮಣ್ಣ, ಕಾಂಗ್ರೆಸ್ ಮುಖಂಡ ಜೆ.ಪಿ.ಚಂದ್ರೇಗೌಡ, ರುದ್ರಾರಾಧ್ಯ ಸೇರಿ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಕುದೂರು ಠಾಣೆಗೆ ಕರೆದೊಯ್ದು, ಬಳಿಕ ಬಿಡುಗಡೆಗೊಳಿಸಿದರು.

ಕುದೂರು ಠಾಣೆಯಿಂದ ಬಿಡುಗಡೆ ನಂತರ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಹೇಮಾವತಿ ನೀರು ನಮ್ಮ ಹಕ್ಕು. ಪ್ರಾಣ ಕೊಟ್ಟಾದರೂ ನೀರು ಪಡೆಯುತ್ತೇವೆ. ನಮಗೆ ಹಂಚಿಕೆಯಾದ ನೀರನ್ನು ನೀಡಲಿ ಎಂದರು.

ತುಮಕೂರಿನ ಬಿಜೆಪಿ, ಜೆಡಿಎಸ್ ನಾಯಕರು ಗೊಂದಲ ಸೃಷ್ಟಿಸಿ ರೈತರನ್ನು ಎತ್ತಿಕಟ್ಟುತ್ತಿದ್ದಾರೆ. ನಾವು ಭಿಕ್ಷೆ ಕೇಳುತ್ತಿಲ್ಲ. ನಮಗೆ ಮುಕ್ಕಾಲು ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ, ಕುಣಿಗಲ್‌ನ ಕೊತ್ತಗೆರೆ ಬಳಿಯ ಜಾಕ್‌ವೆಲ್‌ನ ರೇಜಿಂಗ್ ಮೇನ್‌ಗೆ 3 ಟಿಎಂಸಿಗಿಂತ ಕಡಿಮೆ ಬರುತ್ತಿದೆ. ಆ ನೀರು ಕುಣಿಗಲ್‌ಗೂ ಹಂಚಿಕೆಯಾಗಬೇಕಿದೆ ಎಂದರು.

ಹೇಮಾವತಿ ಡ್ಯಾಂ ನಿರ್ಮಾಣದಿಂದ ಇಲ್ಲಿಯವರೆಗೂ ಅಷ್ಟೆ ಪ್ರಮಾಣದಲ್ಲಿ ಬರುತ್ತಿದ್ದು, ತುಮಕೂರು, ಗುಬ್ಬಿ, ತುರುವೆಕೆರೆ ಭಾಗಕ್ಕೆ ಹಂಚಿಕೆಯಾದ ಎರಡರಷ್ಟು ಕೆರೆಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಅದರಂತೆ ನಮಗೆ ಹಂಚಿಕೆಯಾದ ಮುಕ್ಕಾಲು ಟಿಎಂಸಿ ನೀರು ಕೊಡಲಿ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಹೇಮಾವತಿ ನೀರಿಗೆ ನೀರು ನಿರ್ವಹಣಾ ಸಮಿತಿ ರಚಿಸಿ ಯಾವ ವೇಳೆ ಜಲಾಶಯ ತುಂಬಿದೆ, ಎಷ್ಟು ಮಳೆಯಾಗಿದೆ, ಯಾರಿಗೆ ಎಷ್ಟು ಹಂಚಿಕೆಯಾಗಿದೆ ಎಂದು ಅಷ್ಟು ನೀರನ್ನು ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ತೀರ್ಮಾನಿಸಬೇಕು. ಇಲ್ಲದಿದ್ದರೆ ಉಗ್ರಹೋರಾಟ ನಡೆಸುತ್ತೇವೆ ಎಂದರು.

ಸುರೇಶ್ ಗೌಡರನ್ನು ಹಿರೋ ಮಾಡಬೇಡಿ

ಶಾಸಕ ಸುರೇಶ್ ಗೌಡ ಅವರನ್ನು ಹಿರೋ ಮಾಡಬೇಡಿ, ಕೆಲ ನಾಯಕರು ಸ್ವ ಹಿತಾಸಕ್ತಿಗಾಗಿ ಹೇಮಾವತಿ ವಿಚಾರವಾಗಿ ಏನು ಮಾತನಾಡಿದ್ದಾರೆ, ಏನನ್ನು ಮಾಡಿಕೊಟ್ಟರೆ ಹೇಮಾವತಿ ವಿಚಾರವಾಗಿ ಹೋರಾಟಕ್ಕೆ ಬರುವುದಿಲ್ಲ ಎಂದಿದ್ದಾ ಇತ್ಯಾದಿ ಸಂಭಾಷಣೆಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಬಾಲಕೃಷ್ಣ ಹೊಸಬಾಬ್ ಸಿಡಿಸಿದರು.

ಹೇಮಾವತಿ ನೀರು ತರಲು ಹೋರಾಟ ಮಾಡಿದ ಡಿ.ಕೆ.ಸುರೇಶ್‌ಗೆ ನಮ್ಮ ಜನ ಓಟು ಹಾಕಲಿಲ್ಲ. ವಿಜಯೇಂದ್ರಗೆ ಮೆಚುರಿಟಿ ಇಲ್ಲ ಎಂದು ತೋರಿಸಿದ್ದೀರಾ. ರಾಮನಗರ ಜಿಲ್ಲೆಯಲ್ಲೂ ಬಿಜೆಪಿಗೆ ಮತ ಹಾಕುವರು ಇದ್ದಾರೆ. ಬಿಜೆಪಿಯವರು ನಿದ್ದೆ ಮಾಡುತ್ತಿದ್ದಾರಾ, ವಿಜಯೇಂದ್ರ ಅವರನ್ನು ಇಲ್ಲಿಗೆ ಕರೆಸಿ ನಮ್ಮ ನೋವು ತಿಳಿಸಿ ಎಂದರು.

ಸಿ.ಟಿ. ರವಿ ಡಿ.ಕೆ.ಶಿವಮಾರ್ ಬಗ್ಗೆ ಮಾತನಾಡುವ ವೇಳೆ ಪದಗಳು ಗೌರವಯುತವಾಗಿರಲಿ, ಜನರ ಮಧ್ಯೆ ವೀರಾವೇಶದಿಂದ ಮಾತನಾಡಿದರೆ ಹೀರೋ ಆಗುವುದಿಲ್ಲ. ಸುಮ್ಮನೆ ರಾಜಕೀಯ ಭಾಷಣ ಮಾಡಿದರೆ ಮುಂದೆ ತಕ್ಕ ಉತ್ತರ ನೀಡಲಾಗುವುದು ಎಂದರು.

ಸರ್ಕಾರದ ಮೇಲೆ ಜೆಡಿಎಸ್- ಬಿಜೆಪಿಯವರು ಒತ್ತಡ ಹಾಕುತ್ತಿದ್ದಾರೆ. ನಮ್ಮ ಜಿಲ್ಲೆಯ ಜನರು ಯಾವ ರೀತಿ ಉತ್ತರ ಕೊಡಬೇಕು ಕೊಡುತ್ತಾರೆ. ಬಿಜೆಪಿ-ಜೆಡಿಎಸ್ ಅವರು ತುಮಕೂರಿನ ನಾಯಕರ ಮನವೊಲಿಸಿ ಹೋರಾಟ ವಾಪಸ್ಸು ತೆಗೆಸಬೇಕು, ಇಲ್ಲದಿದ್ರೆ ಜೆಡಿಎಸ್- ಬಿಜೆಪಿಯವರು ರಾಜೀನಾಮೆ ನೀಡಿ ಸಾರ್ವಜನಿಕವಾಗಿ ಬೀದಿಗೆ ಇಳಿಯಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಯೋಜನೆ ಪೂರ್ಣಗೊಂಡು ನಮ್ಮ ನೀರು ನಮಗೆ ಬೇಕಾಗಿದೆ. ತಾಲೂಕಿನ ರೈತರ ಪರವಾದ ಹೋರಾಟವಾಗಿದೆ, ಹೇಮಾವತಿ ನೀರು ನಮ್ಮ ಹಕ್ಕು, ತಾಲೂಕಿನ ಜನರು ಹೋರಾಟ ಮಾಡದಂತೆ ಎಲ್ಲ ಯೋಜನೆಗಳನ್ನು ಸುಲಭವಾಗಿ ಪಡೆದಿದ್ದಾರೆ. ಇನ್ನು ಹೇಮಾವತಿಗೆ ಹೋರಾಟ ಅನಿವಾರ್ಯವಾಗಿದೆ ಎಂದರು.

ವಿಜಯೇಂದ್ರ ಹಣ ಕೊಟ್ಟು ರಾಜ್ಯಾಧ್ಯಕ್ಷರಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರನ್ನು ಇಲ್ಲಿನ ಜನ ಸಂಸದರನ್ನಾಗಿ ಮಾಡಲಿಲ್ಲವೇ?, ಅಂದು ಮಗನನ್ನು ಗೆಲ್ಲಿಸಲು ದೇವೇಗೌಡರು ಕಣ್ಣೀರು ಹಾಕಿದರು. ಇಂದು ನಮಗೆ ನೀರು ನೀಡಿ, ಕಣ್ಣೀರು ಬೇಡ. ನೀರಿಗೆ ಸಹಕಾರ ನೀಡಿ ಎಂದರು. ತಾಲೂಕು ರೈತಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಪಕ್ಷಾತೀತವಾಗಿ ಎಲ್ಲ ನಾಯಕರು ಒಗ್ಗೂಡಿ ನೀರನ್ನು ತರಲು ಯಶಸ್ವಿಗೊಳಿಸಬೇಕು ಎಂದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಿಸಾನ್ ಕಾಂಗ್ರೆಸ್ ಸಮಿತಿ, ಕರ್ನಾಟಕ ರಾಜ್ಯ ರೈತಸಂಘ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ನಮ್ಮ ನವನಿರ್ಮಾಣ ವೇದಿಕೆಗಳು ಬೆಂಬಲ ಸೂಚಿಸಿದರು.

300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೆಂಪೇಗೌಡ ಆಸ್ಪತ್ರೆ ಎಚ್.ಎನ್.ಅಶೋಕ್, ಬಿಎಂಆರ್‌ಡಿಎ ಅಧ್ಯಕ್ಷ ಕೆಂಚೇಗೌಡ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಜೆಪಿ.ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಬಗಿನಗೆರೆ ಕುಮಾರ್, ಹಸಿರು ಸೇನೆ ರೈತಸಂಘದ ಅಧ್ಯಕ್ಷ ಗೋವಿಂದರಾಜು, ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಸದಸ್ಯ ಅನಿಲ್, ರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಶಶಾಂಕ್ ರೇವಣ್ಣ, ಮರೂರು ವೆಂಕಟೇಶ್, ಹಸಿರು ಸೇನೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಬೈರೇಗೌಡ, ಮರೂರು ಬಾಬಣ್ಣ, ನಾರಸಂದ್ರ ಶಿವಪ್ರಸಾದ್, ಮಂಜೇಶ್, ಮಹಂತೇಶ್, ರಾಜಣ್ಣ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಆಗ್ರೋ ಪುರುಷೋತ್ತಮ್, ತಾಲೂಕು ಅಧ್ಯಕ್ಷ ದಿನೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ.ರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net