ಸಚಿವ ಸಂಪುಟ ಸಭೆಗೆ ತಂದು ಸ್ವಾಧೀನಕ್ಕೆ ಪಡೆಯುತ್ತೇವೆ

abbayya
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಿರ್ಮಾಣ ಹಂತದಲ್ಲಿರುವ ಹು-ಧಾ ಮಹಾನಗರ ಪಾಲಿಕೆ ಒಡೆತನದ ಹಳೇ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ ಹಸ್ತಾಂತರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳ್ಳೇಕು. ಈ ವಿಷಯಲ್ಲಿ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಬಿಜೆಪಿಯವರು ರಾಜಕೀಯ ಮಾಡಲು ಹೊರಟರೆ ನಾವು ಬೇರೆ ರೀತಿಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಎಚ್ಚರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಆರೋಗ್ಯ ರಕ್ಷಣೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹಳೇ ಹುಬ್ಬಳ್ಳಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಕ್ರಮೆ ಕೈಗೊಳ್ಳಲಾಗುವುದು ಎಂದರು.

ಹಿಂದಿನ ಹಳೇ ಹುಬ್ಬಳಿ ಹೆರಿಗೆ ಮತ್ತು ಜನರಲ್ ಆಸ್ಪತ್ರೆ 30 ಹಾಸಿಗೆಯದ್ದಾಗಿತ್ತು. ಅಲ್ಲಿಯ ಶೋಚನೀಯ ಸ್ಥಿತಿ ಕಂಡು ಸುಧಾರಣೆಗೆ ಮುಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದ 100 ಕೋಟಿ ರೂ. ವಿಶೇಷ ಅನುದಾನದಲ್ಲಿ 2017ರ ಮೇ 22ರಂದು 7 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಈ ಮೊತ್ತವನ್ನು 5 ಕೋಟಿ ರೂ. ಸೀಮಿತಗೊಳಿಸಿ ಹೊಸ ಆದೇಶ ಹೊರಡಿಸುತ್ತದೆ. ಇದರಲ್ಲಿ 4.4 ಕೋಟಿ ರೂ. ಮಾತ್ರ ಗುತ್ತಿಗೆದಾರರಿಗೆ ಪಾವತಿಯಾಗುತ್ತದೆ. ಉಳಿದ 60 ಲಕ್ಷ ರೂ. ಹಣ ಪಾಲಿಕೆಯಿಂದ ಕೊಡಿ ಎಂದು ಆದೇಶಿಸುತ್ತದೆ. ಇಲ್ಲಿಯವರೆಗೂ ಪಾಲಿಕೆಯಿಂದ ಒಂದೂ ಪೈಸೆಯೂ ಪಾವತಿಯಾಗಿಲ್ಲ ಎಂದು ಹೇಳಿದರು.

ಪಾಲಿಕೆ ಸದಸ್ಯರ ಪಾತ್ರ ಸೊನ್ನೆ:

ನಂತರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಎಂಜಿಎನ್​ವಿವೈ)ಯಡಿ 8 ಕೋಟಿ ರೂ. ಮಂಜೂರು ಮಾಡಲಾಗಿದೆ. ಸಿಎಂ ವಿಶೇಷ ಅನುದಾನ, ಎಂಜಿಎನ್​ವಿವೈ ಅನುದಾನವನ್ನು ನಿರ್ದಿಷ್ಟವಾಗಿ ನಗರಕ್ಕೆ ಮಂಜೂರು ಮಾಡಲಾಗುತ್ತದೆ, ಪಾಲಿಕೆಗೆ ಅಲ್ಲ. ಇದರಲ್ಲಿ ಪಾಲಿಕೆ ಸದಸ್ಯರ ಪಾತ್ರ ಸೊನ್ನೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರ ಸಭೆ ನಡೆಸಿ ಈ ಅನುದಾನವನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ, ಪಾಲಿಕೆಯ ಬಿಜೆಪಿ ಸದಸ್ಯರು ತಮ್ಮ ಹಣ ಎಂದು ವಾದ ಮಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿರುವುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.

ಅಪೂರ್ಣಗೊಂಡಿರುವ ಹಳೇ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಮಂಜೂರು ಮಾಡಿಸಲಾಗುವುದು. ಇಲ್ಲಿ ಐಸಿಯು, ಎನ್​ಐಸಿಯು, ತುರ್ತು ಚಿಕಿತ್ಸಾ ಘಟಕ, 2 ಶಸ್ತ್ರಚಿಕಿತ್ಸಾ ಕೊಠಡಿ, ಇತ್ಯಾದಿ ಸೌಲಭ್ಯಗಳು ಇರಲಿವೆ. ಶಸ್ತ್ರಚಿಕಿತ್ಸೆ ಸೌಲಭಕ್ಕೆ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆಗೆ ಈಗಾಗಲೇ 2 ಕೋಟಿ ರೂ. ಬಿಡುಗಡೆ ಮಾಡಿದೆ. ಇದನ್ನು ಹುಬ್ಬಳ್ಳಿ ತಾಲೂಕು ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಆಗ 84 ಹುದ್ದೆಗಳು ಸೃಷ್ಟಿಯಾಗಲಿದೆ ಎಂದು ತಿಳಿಸಿದರು.</p><p>ಸುದ್ದಿಗೋಷ್ಠಿಯಲ್ಲಿ ಕುಮಾರ ಕುಂದನಹಳ್ಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net