

ಶಿವಮೊಗ್ಗ: ಹಿಂದುಗಳಿಗೆ ಹಿಂದಿನಿಂದ ಚೂರಿ ಹಾಕುವವರಿದ್ದಾರೆ. ಮುಸ್ಲಿಂರಿಗೆ ಏಟು ಬಿದ್ದರೆ ತಕ್ಷಣ ಹೋಗಿ ಪರಿಹಾರ ನೀಡುತ್ತೀರಿ. ಕೇವಲ ಮುಸ್ಲಿಮರಷ್ಟೇ ನಿಮಗೆ ಮತ ಹಾಕಿಲ್ಲ. ಯಾವೊಬ್ಬ ಹಿಂದುಗೂ ಅನ್ಯಾಯವಾಗದ ರೀತಿ ಸರ್ಕಾರ ನಡೆಸಿ ಎಂದು ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ ವೇಳೆ ಕಿಡಿಕಾರಿದರು.
ಭದ್ರಾವತಿ ಶಾಸಕ ಸಂಗಮೇಶ್ವರ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವುದಾದರೆ ಶುಕ್ರವಾರವೇ ಅವರ ಮತಾಂತರಕ್ಕೆ ವ್ಯವಸ್ಥೆ ಮಾಡುತ್ತೇವೆ. ಆದರೆ ಭದ್ರಾವತಿ ಹಿಂದುಗಳು ಇದನ್ನು ಒಪ್ಪುವುದಿಲ್ಲ. ಸಂಗಮೇಶ್ವರ್ ಕೇವಲ ಮುಸ್ಲಿಂ ಮತಗಳಿಂದ ಗೆದ್ದಿಲ್ಲ. ಅವರು ಮತಾಂತರದ ಬಯಕೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ನಾನು ಶಾಸಕರಿಗೆ ಸವಾಲು ಹಾಕುತ್ತೇನೆ. ನೀವು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಮತ್ತೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬಂದರೆ ನಾನು ರಾಜಕಾರಣಕ್ಕೆ ವಿದಾಯ ಹೇಳುತ್ತೇನೆ ಎಂದು ಸವಾಲು ಹಾಕಿದರು.
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹೆಣ್ಣು ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಮತಾಂಧರು ಮಹಿಳಾ ಪೊಲೀಸ್ ಪೇದೆ ಮೇಲೂ ದಾಳಿ ಮಾಡಿದ್ದಾರೆ. ಅದನ್ನು ಅವರೇ ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಇದು ಪೂರ್ವ ನಿಯೋಜಿತ ಸಂಚು ಎಂದು ಅಲ್ಲಿನ ಅಧಿಕಾರಿಗಳು ದೃಢೀಕರಿಸಿದ್ದಾರೆ. ಮೊದಲೇ 27 ಜನರನ್ನು ಬಂಧಿಸಿದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ.
ಈಗ 27 ಜನರನ್ನು ಬಂಧಿಸಿ 500ಕ್ಕೂ ಹೆಚ್ಚು ಹಿಂದು ಪ್ರತಿಭಟನಾಕಾರರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ಸಾಗರದಲ್ಲಿ ಗಣಪತಿ ಮೆರವಣಿಗೆ ಮೇಲೆ ಸಣ್ಣ ಮಕ್ಕಳಿಂದ ಉಗಿಸಿ, ನಂತರ ಕ್ಷಮೆ ಕೇಳಿದ್ದಾರೆ. ಭದ್ರಾವತಿಯಲ್ಲಿ ಮುಸ್ಲಿಂ ಗೂಂಡಾಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.